ಪ್ರಮುಖ ಎಲ್‍ಇಟಿ ಉಗ್ರನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಶ್ರೀನಗರ: ಪಾಕಿಸ್ತಾನ ಲಷ್ಕರ್-ಇ-ತೊಯ್ಬಾ(ಎಲ್‍ಇಟಿ) ಉಗ್ರ ಸಂಘಟನೆಯ ಪ್ರಮುಖ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನಲ್ಲಿ ಭಾರತೀಯ ಸೇನೆ ಎನ್‍ಕೌಂಟರ್ ಮಾಡಿ ಹೊಡೆದುರುಳಿಸಿದೆ.

ಮೃತ ಉಗ್ರನನ್ನು ಎಲ್‍ಇಟಿ ಉಗ್ರ ಸಂಘಟನೆಯ ಆಸಿಫ್ ಮಕ್ಬುಲ್ ಭಟ್ ಎಂದು ಗುರುತಿಸಲಾಗಿದ್ದು, ಸೊಪೋರ್‌ನಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರ ಕುಟುಂಬದ ಮೂವರು ಸದಸ್ಯರ ಮೇಲೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ. ಗಾಯಗೊಂಡವರಲ್ಲಿ ಅಸ್ಮಾ ಜನ್ ಎಂಬ ಯುವತಿಯೂ ಸೇರಿದ್ದಾಳೆ. ಸೊಪೋರ್‌ನ ವಲಸೆ ಕಾರ್ಮಿಕ ಶಫಿ ಆಲಂ ಮೇಲೆ ಗುಂಡು ಹಾರಿಸಲು ಆಸಿಫ್ ಕೂಡ ಪ್ರಮುಖ ಕಾರಣ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಈ ಪ್ರದೇಶದಲ್ಲಿ ಆಸಿಫ್ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ. ಕೆಲ ಕಾರ್ಮಿಕರನ್ನು ಬಳಸಿಕೊಂಡು ಅವರಿಂದ ಸಾರ್ವಜನಿಕರನ್ನು ಹೆದರಿಸಲು ಪೋಸ್ಟರ್‌ಗಳನ್ನು ಆತ ಪ್ರಿಂಟ್ ಮಾಡಿಸುತ್ತಿದ್ದನು. ಅಲ್ಲದೆ ವ್ಯಾಪಾರಿಗಳನ್ನು ಹೆದರಿಸಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚುವಂತೆ ಮಾಡುತ್ತಿದ್ದ, ಜೊತೆಗೆ ಇಲ್ಲಿನ ನಿವಾಸಿಗಳಿಗೆ ದಿನನಿತ್ಯದ ಚಟುವಟಿಕೆಗಳನ್ನು ಕೂಡ ಮಾಡಲು ಬಿಡುತ್ತಿರಲಿಲ್ಲ. ಪ್ರತಿನಿತ್ಯ ಸ್ಥಳೀಯರಿಗೆ ಹಿಂಸೆ ನೀಡುತ್ತಿದ್ದ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್‍ಬಗ್ ಸಿಂಗ್ ತಿಳಿಸಿದರು.

ಅಲ್ಲದೆ ಸದ್ಯ ಕಣಿವೆ ರಾಜ್ಯದಲ್ಲಿ ಯಾವುದೇ ತೊಂದರೆ ಇಲ್ಲ. ಶಾಲಾ, ಕಾಲೇಜುಗಳು ಆರಂಭವಾಗಿದೆ. ಜನಜೀವನ ಸಹಜಸ್ಥಿತಿಗೆ ಮರಳಿದೆ. ಕಾರ್ಗಿಲ್‍ನಲ್ಲೂ ಎಲ್ಲವೂ ಸರಿಯಾಗಿದೆ, ಯಾವುದೇ ತೊಂದರೆಯಿಲ್ಲ. ಕಣಿವೆ ರಾಜ್ಯದ ಶೇಕಡ 90 ಪ್ರದೇಶಗಳು ನಿರ್ಬಂಧಗಳಿಂದ ಮುಕ್ತವಾಗಿದೆ. 100% ಫೋನ್, ಇಂಟರ್‌ನೆಟ್ ಸೇವೆಗಳು ಚಾಲ್ತಿಯಲ್ಲಿದೆ ಎಂದು ಡಿಜಿಪಿ ಹೇಳಿದರು.

ಉಗ್ರರು ಅಡಗಿ ಕುಳಿತಿರುವ ಮಾಹಿತಿ ತಿಳಿಯುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನಾ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಆರಂಭಿಸಿತ್ತು. ಮೂಲಗಳ ಪ್ರಕಾರ, ಆಸಿಫ್ ಕಾರಿನಲ್ಲಿ ತೆರೆಳುತ್ತಿದ್ದ ವೇಳೆ ಕ್ರಾಸಿಂಗ್‍ನಲ್ಲಿ ಭದ್ರತಾ ಪಡೆ ಸಿಬ್ಬಂದಿ ಆತನನ್ನು ತಡೆದಿದ್ದರು. ಆಗ ಆತ ಏಕಾಏಕಿ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದನು. ಇದಕ್ಕೆ ಪ್ರತ್ಯುತ್ತರ ಕೊಟ್ಟ ಸೇನೆ ಆತನನ್ನು ಎನ್‍ಕೌಂಟರ್ ಮಾಡಿ ಹತ್ಯೆಮಾಡಿದೆ.

ಸೋಮವಾರದಂದು ಜಮ್ಮು ಕಾಶ್ಮೀರ ಪೊಲೀಸರು 8 ಮಂದಿ ಉಗ್ರರನ್ನು ಸೊಪೋರ್‌ನಲ್ಲಿ ಸೆರೆಹಿಡಿದಿದ್ದರು. ಬಂಧಿತ ಉಗ್ರರು ಸೊಪೋರ್ ಪ್ರದೇಶದಲ್ಲಿ ಶಾಂತಿ ಕದಡಲು ಪ್ರಚೋಧನಕಾರಿ ಪೋಸ್ಟರ್‌ಗಳು, ಉಗ್ರರನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಪ್ರಿಂಟ್ ಮಾಡಿ ಎಲ್ಲೆಡೆ ಹಂಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದರು.

Comments

Leave a Reply

Your email address will not be published. Required fields are marked *