ಅನಂತ್‍ನಾಗ್‍ನಲ್ಲಿ ಗುಂಡಿನ ಚಕಮಕಿ- ಮೂವರು ಉಗ್ರರು ಹತ

ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‍ನಾಗ್‍ನ ಹೊರವಲಯದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಮೂವರು ಉಗ್ರರು ಹತರಾಗಿದ್ದಾರೆ.

ಅನಂತ್‍ನಾಗ್ ಜಿಲ್ಲೆಯ ಹೊರವಲಯದ ಬಿಜ್‍ಬೆಹರಾದಲ್ಲಿ ನಡೆದ ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯ ಯೋಧನಿಗೆ ಸಣ್ಣ ಪುಟ್ಟ ಕಾಯಗಳಾಗಿದ್ದು, ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಕಮಾಂಡರ್ ನಾಸಿರ್ ಚಂದ್ರು ನೇತೃತ್ವದ ಮೂವರು ಉಗ್ರರ ತಂಡವು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಉಗ್ರರು ಅಡಗಿರುವ ಸ್ಥಳಕ್ಕೆ ಭದ್ರತಾ ಪಡೆ ಹತ್ತಿರವಾಗುತ್ತಿದ್ದಂತೆ ಭಯೋತ್ಪಾಕರು ಗುಂಡು ಹಾರಿಸಲು ಪ್ರಾರಂಭಿಸಿದರು. ಹೀಗಾಗಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದೆ. ಕಾರ್ಯಾಚರಣೆ ಮುಗಿದ ನಂತರ ಸಾವಿನ ಸಂಖ್ಯೆ ಹಾಗೂ ಮೃತದೇಹಗಳನ್ನು ಪತ್ತೆ ಹಚ್ಚಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರದೇಶವನ್ನು ಕಾಶ್ಮೀರ ವಲಯ ಪೊಲೀಸರು ಮತ್ತು ಭದ್ರತಾ ಪಡೆಗಳು ಸುತ್ತುವರಿದಿವೆ. ಪ್ರಾಥಮಿಕ ವರದಿಗಳ ಪ್ರಕಾರ ಹಿಜ್ಬುಲ್ ಮುಜಾಹಿದ್ದೀನ್(ಎಚ್‍ಎಂ) ಭಯೋತ್ಪಾದಕರು ವಸತಿ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ. ಉಗ್ರರು ವಸತಿ ಕಟ್ಟಡದೊಳಗೆ ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಎನ್‍ಕೌಂಟರ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಗುಂಡಿನ ಚಕಮಕಿ ಪ್ರಾರಂಭವಾಗಿದೆ. ಸೇನೆ ಹಾಗೂ ಅರೆಸೇನಾ ಪಡೆಗಳಿಂದ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ.

370ನೇ ವಿಧಿ ರದ್ದು ಪಡಿಸಿದ ನಂತರ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸುತ್ತಿದ್ದು, ರಾಜ್ಯದ ಪರಿಸ್ಥಿತಿ ದುರ್ಬಲವಾಗಿರುವ ಸಮಯದಲ್ಲಿ ಈ ದಾಳಿ ನಡೆದಿದೆ. ಸೋಮವಾರದಿಂದ ಕಾಶ್ಮೀರ ಕಣಿವೆಯಲ್ಲಿ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಆದರೆ ಮಂಗಳವಾರ ಮೆಸೇಜಿಂಗ್ ಸೇವೆಯನ್ನು ನಿಲ್ಲಿಸುವ ಕುರಿತು ಅಲ್ಲಿನ ಸರ್ಕಾರ ನಿರ್ಧಾರ ಕೈಗೊಂಡಿದೆ.

Comments

Leave a Reply

Your email address will not be published. Required fields are marked *