Haryana Election Results| ಜಿಲೇಬಿ ಟ್ರೆಂಡ್‌ ಆಗಿದ್ದು ಯಾಕೆ?

ನವದೆಹಲಿ: ಹರಿಯಾಣ ಚುನಾವಣಾ ಫಲಿತಾಂಶ (Haryana Election Results) ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜಿಲೇಬಿ (Jalebi) ಫುಲ್‌ ಟ್ರೆಂಡಿಂಗ್‌ನಲ್ಲಿದೆ.

ಜಿಲೇಬಿ ಫುಲ್‌ ಟ್ರೆಂಡಿಗ್‌ (Trending) ಆಗಲು ಕಾರಣವಿದೆ. ಹರಿಯಾಣ ಚುನಾವಣೆಯ ಪ್ರಚಾರ ಭಾಷಣದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul gandhi) ಜಿಲೇಬಿ ಪ್ರಸ್ತಾಪ ಮಾಡಿ ಮಾತನಾಡಿದ್ದರು.  ಇದನ್ನೂ ಓದಿ: ಒಮರ್‌ ಅಬ್ದುಲ್ಲಾ ಜಮ್ಮು ಕಾಶ್ಮೀರದ ಮುಂದಿನ ಸಿಎಂ

ರಾಹುಲ್‌ ಹೇಳಿದ್ದೇನು?
ಹರಿಯಾಣದ ಜಿಲೇಬಿ ತುಂಬಾ ರುಚಿಕರವಾಗಿದ್ದು, ಅದನ್ನು ವಿಶ್ವಾದ್ಯಂತ ರಫ್ತು ಮಾಡಬೇಕು. ಸ್ಥಳೀಯ ಅಂಗಡಿಗಳನ್ನು ಜಿಲೇಬಿ ಕಾರ್ಖಾನೆಗಳಾಗಿ ಬದಲಾಗಬೇಕು. ಈ ಜಿಲೇಬಿಗಳು ದೇಶ ಮತ್ತು ವಿದೇಶಕ್ಕೆ ಹೋದರೆ 10,000 ರಿಂದ 50,000 ಮಂದಿಗೆ ಉದ್ಯೋಗ ಸಿಗಲಿದೆ.

ನಾನು ಹರಿಯಾಣದ ಜಿಲೇಬಿಯನ್ನು ತಿಂದಿದ್ದೇನೆ. ಇದು ತುಂಬಾ ರುಚಿಕರವಾಗಿದೆ. ಈ ಜಿಲೇಬಿಗಳನ್ನು ಜಪಾನ್ ಮತ್ತು ಅಮೆರಿಕದಂತಹ ವಿವಿಧ ದೇಶಗಳಿಗೆ ರಫ್ತು ಮಾಡಬೇಕು. ಆದರೆ ಮೋದಿ ಅವರು ಅದಾನಿ ಅಂಬಾನಿಗೆ ದೇಶದ ಸಂಪತ್ತು ಹಂಚಿದ್ದರಿಂದ  ಜಿಲೇಬಿ ಅಂಗಡಿ ತೆರೆಯಲು ನಿಮಗೆ ಸಾಲ ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.

ಈಗ ಟ್ರೆಂಡ್‌ ಯಾಕೆ?
ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಲಿದೆ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಜಿಲೇಬಿ ತಯಾರಿಸಲು ಆರ್ಡರ್‌ ನೀಡಿದ್ದರು. ಅಷ್ಟೇ ಅಲ್ಲದೇ ಫಲಿತಾಂಶ ಪ್ರಕಟವಾಗುವ ಮೊದಲೇ ಜಿಲೇಬಿಯನ್ನು ಕಾಂಗ್ರೆಸ್‌ ಕೆಲ ಕಡೆ ಹಂಚಿಕೊಂಡಿತ್ತು.

ಬೆಳಗ್ಗೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮುನ್ನಡೆ ಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಬೆಂಬಲಿಗರು ಜಿಲೇಬಿ ಫೋಟೋವನ್ನು ಹಾಕತೊಡಗಿದ್ದರು. ಆದರೆ ಫಲಿತಾಂಶ ಬದಲಾಗುತ್ತಿದ್ದಂತೆ ಬಿಜೆಪಿ ಬೆಂಬಲಿಗರು ಈಗ ಜಿಲೇಬಿ ಫೋಟೋವನ್ನು ಹಾಕಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಕಾರಣ ಈಗ ಜಿಲೇಬಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗಿದೆ.