ಜಮ್ಮು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ

ಶ್ರೀನಗರ: ಶ್ರೀನಗರದಲ್ಲಿ (Srinagar) ನಾಲ್ವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಭದ್ರತಾ ಪಡೆ (Security forces) ಬಂಧಿಸಿದೆ.

ನಿರ್ದಿಷ್ಟ ಮಾಹಿತಿಯ ಮೇರೆಗೆ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿರುವ ನಾಲ್ವರು ಬರುತ್ತಿದ್ದಾರೆ ಎಂಬ ಮಾಹಿತಿ ಇತ್ತು. ಇದರಿಂದ ಶನಿವಾರ ಸಂಜೆ ನಗರದ ಹೊರವಲಯದಲ್ಲಿರುವ ನೌಗಾಮ್‍ನ ಕೆನಿಹಮಾ ಪ್ರದೇಶದಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿತ್ತು. ತಪಾಸಣೆಯ ಸಮಯದಲ್ಲಿ, ಭದ್ರತಾ ಪಡೆಗಳು ವಾಹನವನ್ನು ತಡೆದು ನಾಲ್ವರನ್ನು ಬಂಧಿಸಲಾಯಿತು ಎಂದು ಸೇನೆಯ (Indian Army) ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ

ಬಂಧಿತರನ್ನು ಮೊಹಮ್ಮದ್ ಯಾಸೀನ್ ಭಟ್, ಶೆರಾಜ್ ಅಹ್ಮದ್ ರಾಥರ್, ಗುಲಾಮ್ ಹಸನ್ ಖಾಂಡೆ ಹಾಗೂ ಇಮ್ತಿಯಾಜ್ ಅಹ್ಮದ್ ಭಟ್ ಎಂದು ಗುರುತಿಸಿದ್ದಾರೆ. ಬಂಧಿತರು ಲಕ್‍ನಂಬಲ್ ಜಫ್ರಾನ್ ಕಾಲೋನಿ ಪಂಥಾ ಚೌಕ್ ಮತ್ತು ಫ್ರೆಸ್ಟಾಬಲ್ ಪಾಂಪೋರ್‌ನ ನಿವಾಸಿಗಳು ಎಂಬುದು ತಿಳಿದು ಬಂದಿದೆ.

ಉಗ್ರರಿಂದ ಮೂರು ಮ್ಯಾಗಜೀನ್‍ಗಳು, ಎಕೆ 56 ರೈಫಲ್, 7.62, 39 ಎಂಎಂನ 75 ಸುತ್ತುಗಳು, ಎರಡು ಮ್ಯಾಗಜೀನ್‍ಗಳಿರುವ ಗ್ಲೋಕ್ ಪಿಸ್ತೂಲ್, 9 ಎಂಎಂನ 26 ಸುತ್ತುಗಳು ಮತ್ತು ಆರು ಚೈನೀಸ್ ಗ್ರೆನೇಡ್‍ಗಳು ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ವೇಳೆ, ಬಂಧಿತ ವ್ಯಕ್ತಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಜೆಎಂ ಜೊತೆ ನಂಟು ಹೊಂದಿರುವುದು ತಿಳಿದು ಬಂದಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ಆಸ್ಪತ್ರೆಯಿಂದ ಹೆಚ್‌ಡಿಕೆ ಡಿಸ್ಚಾರ್ಜ್‌ – ಇಂದು ಬೆಂಗಳೂರಿಗೆ