ಡಬ್ಬಿಂಗ್ ಮಾಡೋರಿಗೆ ಲಾಸ್ ಆಗಿರ್ಬೇಕು, ಅದಕ್ಕೆ ದಂಡ ಹಾಕ್ಸಿದ್ದಾರೆ: ಜಗ್ಗೇಶ್

ಬೆಂಗಳೂರು: ಡಬ್ಬಿಂಗ್ ಮಾಡುವವರಿಗೆ ನಷ್ಟ ಆಗಿರಬೇಕು, ಹೀಗಾಗಿ ದಂಡ ಹಾಕಿಸಿದ್ದಾರೆ ಎನ್ನುವ ಮೂಲಕ ಡಬ್ಬಿಂಗ್ ವಿರುದ್ಧ ಹೋರಾಟಕ್ಕೆ ಬಿದ್ದ ದಂಡಕ್ಕೆ ನಟ ಜಗ್ಗೇಶ್ ವ್ಯಂಗ್ಯವಾಗಿ ಕಿಡಿಕಾರಿದ್ದಾರೆ.

ಡಬ್ಬಿಂಗ್ ವಿಚಾರವಾಗಿ ಹೋರಾಟ ನಡೆಸಿದ್ದ ನಟ ಜಗ್ಗೇಶ್‍ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ದಂಡ ವಿಧಿಸಿತ್ತು. ಈ ಕುರಿತು ತಮ್ಮ 8 ಎಂಎಂ ಸಿನಿಮಾದ ಆಡಿಯೋ ರಿಲೀಸಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಉದ್ಯಮಕ್ಕೋಸ್ಕರ ಹೋರಾಟ ಮಾಡಿದ್ದೇನೆಯೇ ಹೊರತು, ಜಗ್ಗೇಶ್‍ಗಾಗಿ ಅಲ್ಲ. ಕನ್ನಡ ಫಿಲ್ಮ್ ಚೇಂಬರ್ ಕರೆದಿದ್ದಕ್ಕೆ ನಾನು ಹೋಗಿದ್ದೆ. ಯಾವುದೇ ಸ್ವಾರ್ಥವಿಟ್ಟುಕೊಂಡು ಹೋರಾಟಕ್ಕೆ ಹೋಗಿರಲಿಲ್ಲ ಎಂದರು.

ಡಬ್ಬಿಂಗ್ ಮಾಡುವವರಿಗೆ ತುಂಬಾ ಲಾಸ್ ಆಗಿರುವ ಹಾಗೆ ಕಾಣುತ್ತಿದೆ. ಹೀಗಾಗಿ ದಂಡ ಹಾಕಿಸಿದ್ದಾರೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಈ ಕುರಿತು ನಾನು ಹೋರಾಟ ಮಾಡುತ್ತೇನೆ. ಶೀಘ್ರವೇ ಮೇಲ್ಮನವಿ ಸಲ್ಲಿಸುತ್ತೇನೆ. ನಾನು ಕೋರ್ಟ್ ಆದೇಶ ಬರುವುದಕ್ಕೂ ಮೊದಲೇ ಡಬ್ಬಿಂಗ್ ವಿರುದ್ಧ ಮಾತನಾಡಿದ್ದೆ, ಆದೇಶ ಬಂದ ಮೇಲೆ ಮಾತನಾಡಿಲ್ಲವೆಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಡಬ್ಬಿಂಗ್ ಚಿತ್ರ ಬಿಡುಗಡೆಯಾದ್ರೆ ಆ ಚಿತ್ರಮಂದಿರಕ್ಕೆ ಬೆಂಕಿ: ಜಗ್ಗೇಶ್

ಏನಿದು ಪ್ರಕರಣ?
ತಮಿಳು ನಟ ಅಜಿತ್ ಅಭಿನಯದ ತಮಿಳಿನ `ಎನ್ನೈ ಎರಿಂದಲ್’ ಚಿತ್ರವನ್ನು ಕನ್ನಡಕ್ಕೆ ಸತ್ಯದೇವ್ ಐಪಿಎಸ್ ಮೂಲಕ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ತಯಾರಿ ನಡೆದಿತ್ತು. ಇದರ ವಿರುದ್ಧ ಕರ್ನಾಟಕ ಚಲನಚಿತ್ರ ಮಂಡಳಿ, ನಟ ಜಗ್ಗೇಶ್, ನಿರ್ಮಾಪಕ ಸಾರಾ ಗೋವಿಂದ್ ಹಾಗೂ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆದಿತ್ತು. ಚಿತ್ರ ಬಿಡುಗಡೆಗೆ ಅಡ್ಡಿಪಡಿಸಿದ್ದರ ಕುರಿತು ಚಿತ್ರದ ವಿತರಕರು ಸಿಸಿಐಗೆ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ ಸಿಸಿಐ ಕರ್ನಾಟಕ ಚಲನಚಿತ್ರ ಮಂಡಳಿಗೆ 9,72,943 ರೂ.  ನಟ ಜಗ್ಗೇಶ್ ಗೆ 2,71,286 ರೂ. ಹಾಗೂ ನಿರ್ಮಾಪಕ ಸಾರಾ ಗೋವಿಂದು ಅವರಿಗೆ 15,121 ರೂ. ದಂಡವನ್ನು ವಿಧಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *