ಜಗನ್ ಸೈಕೋನಂತೆ ವರ್ತಿಸ್ತಿದ್ದಾರೆ: ಚಂದ್ರ ಬಾಬು ನಾಯ್ಡು

ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹರಿಹಾಯ್ದಿದ್ದಾರೆ. ಅಲ್ಲದೆ ಈ ಹೊಸ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ವಿಶಾಖಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದ ನಾಯಕರ ಮೇಲೆ ಸುಖಾಸುಮ್ಮನೆ ಕೇಸ್ ಗಳನ್ನು ಹಾಕುತ್ತಾರೆ. ಈ ಮೂಲಕ ಪೊಲೀಸರು ಕೂಡ ಅನಗತ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದ್ದಾರೆ. ಹೀಗಾಗಿ ನನ್ನೊಂದಿಗೆ ಯಾರು ಚೆನ್ನಾಗಿ ಇರುತ್ತಾರೆಯೋ ಅವರೊಂದಿಗೆ ನಾನು ಕೂಡ ಚೆನ್ನಾಗಿಯೇ ಇರುತ್ತೇನೆ. ಆದರೆ ಜಗನ್ ಮಾತ್ರ ಓರ್ವ ಸೈಕೋನಂತೆ ವರ್ತಿಸುತ್ತಿದ್ದಾರೆ ಎಂದು ತೆಲುಗು ದೇಶಂ ಪಾರ್ಟಿ(ಟಿಡಿಪಿ) ಮುಖ್ಯಸ್ಥ ನಾಯ್ಡು ತಿಳಿಸಿದ್ದಾರೆ.

ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷ(ವೈಎಸ್‍ಆರ್) ದ ಆಡಳಿತ ಅತ್ಯಂತ ಕೆಟ್ಟದಾಗಿದೆ. ಪಕ್ಷದ ನಾಯಕರು ಜೆ ತೆರಿಗೆ(ಜಗನ್ ಟ್ಯಾಕ್ಸ್) ಸಂಗ್ರಹಿಸುತ್ತಾರೆ. ನಾನು ಸಾಕಷ್ಟು ಮಂದಿ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ ಇಂತಹ ಸಿಎಂ ಅವರನ್ನು ನಾನೆಂದೂ ನೋಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ. ಸೊಕ್ಕಿನ ವರ್ತನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಇದೇ ವೇಳೆ ನಾಯ್ಡು ಜಗನ್ ಗೆ ಎಚ್ಚರಿಕೆ ನೀಡಿದರು.

ಈ ಸರ್ಕಾರ ಟಿಡಿಪಿ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ. ಇದು ನ್ಯಾಯಯುತವಲ್ಲ ಎಂದು ತಿಳಿಸಿದ್ದಾರೆ. ಜಗನ್ ರೆಡ್ಡಿ ಅಧಿಕಾರಕ್ಕೆ ಬಂದು 4 ತಿಂಗಳಾಗಿದ್ದು, ಅಂದಿನಿಂದಲೂ ಟಿಡಿಪಿ ಪಕ್ಷ ಜಗನ್ ವಿರುದ್ಧ ಕಿಡಿಕಾರುತ್ತಲೇ ಬಂದಿದೆ.

Comments

Leave a Reply

Your email address will not be published. Required fields are marked *