ಉತ್ತರ ಕರ್ನಾಟಕ ಕಡೆಗಣನೆ, ಸಿಎಂ ಎಚ್‍ಡಿಕೆ ಬಂಡತನದ ವರ್ತನೆ – ಶೆಟ್ಟರ್ ಕಿಡಿ

ಹುಬ್ಬಳ್ಳಿ: ಸಿಎಂ ಕುಮಾರಸ್ವಾಮಿ ಅವರು ಉದ್ದೇಶ ಪೂರ್ವಕವಾಗಿ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿದ್ದು, ಹಾಸನ, ರಾಮನಗರ, ಮಂಡ್ಯಗಳನ್ನು ಮಾತ್ರ ರಾಜ್ಯ ಎಂದು ತಿಳಿದುಕೊಂಡಿದ್ದಾರೆ. ಉತ್ತರ ಕರ್ನಾಟಕದವರು ತಮಗೆ ಮತಹಾಕಿಲ್ಲ ಎನ್ನುವ ಮೂಲಕ ಸಿಎಂ ಬಂಡತನದಿಂದ ವರ್ತಿಸುತ್ತಿದ್ದಾರೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಸ್ಥಿತಿ ಈಗ ದುಸ್ಥಿತಿ ತಲುಪಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ರಾಜ್ಯ ಸರ್ಕಾರ ಸತ್ತು ಹೋಗಿದೆ ಎನ್ನುವ ಭಾವನೆ ಮೂಡುತ್ತಿದೆ. ಸರ್ಕಾರದ ಬಂಡತನದ ವಿರುದ್ಧ ಡಿಸೆಂಬರ್ 10 ರಂದು ಬೆಳಗಾವಿಯ ಸುವರ್ಣಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಬರಗಾಲದ ಹಿನ್ನೆಲೆಯಲ್ಲಿ ಹಂಪಿ ಉತ್ಸವ ರದ್ದು ಮಾಡಿದ್ದು ಸರಿಯಲ್ಲ, ರದ್ದು ಮಾಡುವುದಾದರೆ ರಾಜ್ಯದ ಎಲ್ಲಾ ಉತ್ಸವಗಳನ್ನು ರದ್ದು ಮಾಡಲಿ. ಕೆಲವು ಉತ್ಸವಗಳನ್ನು ಮಾಡಿ, ಇನ್ನು ಕೆಲವನ್ನು ಮಾಡದಿರುವುದು ಸರಿಯಲ್ಲ. ಸರಳವಾಗಿಯಾದರೂ ಹಂಪಿ ಉತ್ಸವ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಕಮಿಷನ್ ಆಸೆಗೆ ಬಿದ್ದ ರಾಜ್ಯ ಸರ್ಕಾರ:
ರಾಜ್ಯದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ವಶಿಕ್ಷಣ ಅಭಿಯಾನದಡಿ ಎರಡು ಜೊತೆ ಸಮವಸ್ತ್ರ ಕೊಡಬೇಕಿತ್ತು. ಆದರೆ ಇದುವರೆಗೂ ಸರ್ಕಾರ ಒಂದು ಜೊತೆ ಸಮವಸ್ತ್ರ ಮಾತ್ರ ಕೊಟ್ಟಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಬಟ್ಟೆ ಖರೀದಿಯಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿ ವರ್ಷ ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. ಆದರೆ ಕಮಿಷನ್ ಆಸೆಗೆ ಬಿದ್ದ ಸರ್ಕಾರ ದೊಡ್ಡ ಕಂಪನಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಮುಂಬಯಿ ಮೂಲದ ಮಫತ್ಲಾಲ್, ಸಂಗಮ್ ಕಂಪನಿಗಳಿಗೆ ಗುತ್ತಿಗೆ ಕೊಡಲು ಮುಂದಾಗಿದ್ದರು, ಆದರೆ ನಮ್ಮ ಆಕ್ಷೇಪದಿಂದ ಒಪ್ಪಂದ ರದ್ದುಪಡಿಸಿ, ಎಸ್‍ಡಿಎಮ್‍ಸಿಗೆ ಬಟ್ಟೆ ಖರೀದಿಸಲು ಸೂಚಿಸಿದ್ದರು. ಆದರೆ ಆರು ತಿಂಗಳು ಕಳೆದರೂ ಬಟ್ಟೆ ಖರೀದಿಸಲು ಶಾಲೆಗಳಿಗೆ ಹಣ ಕೊಟ್ಟಿಲ್ಲ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಕೊಟ್ಟರೂ ರಾಜ್ಯ ಸರ್ಕಾರ ಮಾತ್ರ ಕೊಡುತ್ತಿಲ್ಲ ಎಂದು ದೂರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *