Jaffar Express Hijack – ವೀಡಿಯೋ ರಿಲೀಸ್ ಮಾಡಿದ ಬಲೂಚ್ ಲಿಬರೇಶನ್ ಆರ್ಮಿ

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಹೈಜಾಕ್ (Jaffar Express Hijack) ಮಾಡಿದ್ದ ವೀಡಿಯೊವನ್ನು ಬಲೂಚ್ ಲಿಬರೇಶನ್ ಆರ್ಮಿ (Baloch Liberation Army) ಬಿಡುಗಡೆ ಮಾಡಿದೆ.

ಬಲೂಚ್ ಲಿಬರೇಶನ್ ಆರ್ಮಿಯ ಮಾಧ್ಯಮ ವಿಭಾಗ ಹಕ್ಕಲ್, ಈ ಹೈಜಾಕ್‌ಗೆ ಮಾರ್ಚ್ 2025 ದರ್ರಾ-ಎ-ಬೋಲನ್ 2.0 ಎಂಬ ಹೆಸರು ಕೊಟ್ಟು, ಎಕ್ಸ್‌ನಲ್ಲಿ ವೀಡಿಯೋ ಬಿಡುಗಡೆ ಮಾಡಿದೆ. ವೀಡಿಯೋದಲ್ಲಿ ಬಲೂಚ್ ಹೋರಾಟಗಾರರು ರೈಲ್ವೆ ಹಳಿಯನ್ನು ಸ್ಫೋಟಿಸುವುದು, ಹಳಿಗಳ ಮೇಲೆ ಸ್ಫೋಟಕಗಳನ್ನು ಎಸೆಯುವುದು ಸೆರೆಯಾಗಿದೆ. ಅಲ್ಲದೇ ಹೋರಾಟಗಾರರು ರೈಲಿನ ಒಳಗೆ ನುಗ್ಗಿರುವುದು, ರೈಲಲ್ಲಿರುವ ಪ್ರಯಾಣಿಕರನ್ನು ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ.‌ ಇದನ್ನೂ ಓದಿ: 400 ಪ್ರಯಾಣಿಕರಿದ್ದ ಪಾಕ್‌ ರೈಲು ಹೈಜಾಕ್ – 120 ಮಂದಿ ಒತ್ತೆಯಾಳಾಗಿರಿಸಿಕೊಂಡ ಉಗ್ರರು, 6 ಸೈನಿಕರ ಹತ್ಯೆ

ಪಾಕ್‌ ವಿರುದ್ಧದ ಬಿಎಲ್‌ಎ ನಿಯಂತ್ರಣವನ್ನು ಒತ್ತಿಹೇಳುವ ಕಾರ್ಯಾಚರಣೆಯ ಮೊದಲ ಸಮಗ್ರ ವೀಡಿಯೋ ಇದಾಗಿದೆ. ವೀಡಿಯೊದಲ್ಲಿ ಬಿಎಲ್‌ಎ ಹೋರಾಟಗಾರನೊಬ್ಬ, ನಮ್ಮ ಹೋರಾಟ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತಕ್ಕೆ ಬಂದಿದೆ. ನಮ್ಮ ಯುವಕರು ಅಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಏಕೆಂದರೆ ಹೋರಾಟದಂತಹ ನಿರ್ಧಾರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಗಳು ನಮಗೆ ಉಳಿದಿಲ್ಲ. ಬಂದೂಕನ್ನು ನಿಲ್ಲಿಸಲು ಬಂದೂಕಿನ ಅಗತ್ಯವಿದೆ ಎಂದಿದ್ದಾನೆ. ಈ ಮೂಲಕ ದಾಳಿಯ ಹಿಂದಿನ ಉದ್ದೇಶಗಳನ್ನು ಒತ್ತಿ ಹೇಳಿದ್ದಾನೆ.

ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್
ಮಾ.11 ರಂದು 400 ಪ್ರಯಾಣಿಕರಿದ್ದ ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು (Jaffar Express Train) ಬಲೂಚಿಸ್ತಾನ್‌ (Balochistan) ಪ್ರಾಂತ್ಯದ ಪ್ರತ್ಯೇಕತಾ ವಾದಿ ಹೋರಾಟಗಾರರ ಗುಂಪು ಬೋಲಾನ್‌ ಪ್ರದೇಶದಲ್ಲಿ ಹೈಜಾಕ್‌ ಮಾಡಿತ್ತು. ಗುಂಪು, ರೈಲಲ್ಲಿದ್ದ ಕನಿಷ್ಠ 21 ಪ್ರಯಾಣಿಕರು ಮತ್ತು ನಾಲ್ವರು ಅರೆಸೈನಿಕ ಪಡೆ ಯೋಧರ ಹತ್ಯೆ ಮಾಡಿತ್ತು.

ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಬಿಎಲ್‌ಎ ಹೋರಾಟಗಾರರು ಮೋದಲು ಗುಂಡಿನ ದಾಳಿ ಮಾಡಿದ್ದರು. ಬಳಿಕ ಬೋಲಾನ್‌ನ ಧದರ್‌ನ ಮಶ್ಕಾಫ್‌ನಲ್ಲಿ ಪ್ರದೇಶದಲ್ಲಿ ಪೇಶಾವರ ಮಾರ್ಗದ ರೈಲ್ವೆ ಹಳಿಯನ್ನು ಸ್ಫೋಟಿಸಿದ್ದರು. ಇದರಿಂದ ಜಾಫರ್ ಎಕ್ಸ್‌ಪ್ರೆಸ್ ಹಳಿ ತಪ್ಪಿತ್ತು. ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು.

ಒತ್ತೆಯಾಳುಗಳ ರಕ್ಷಣೆಗೆ ತೆರಳಿದ್ದ ಪಾಕ್‌ ಸೇನೆ ಹಾಗೂ ಬಲೂಚ್‌ ಹೋರಾಟಗಾರರ ನಡುವೆ ತೀವ್ರ ಗುಂಡಿನ ಚಕಮಕಿಯಾಗಿತ್ತು. ಈ ಬಗ್ಗೆ, ಪಾಕ್‌ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್, ಭದ್ರತಾ ಪಡೆಗಳು ಸ್ಥಳದಲ್ಲಿದ್ದ ಎಲ್ಲಾ 33 ಉಗ್ರರನ್ನು ಹತ್ಯೆಗೈದಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಪಾಕ್‌ ರೈಲು ಹೈಜಾಕ್‌; 150 ಸೆರೆಯಾಳುಗಳ ರಕ್ಷಣೆ – 27 ಉಗ್ರರ ಹತ್ಯೆ