ಚೀನಾಗೆ ಬಿಗ್‌ ಶಾಕ್‌ – ಮಹತ್ವಾಕಾಂಕ್ಷೆಯ BRI ಯೋಜನೆಯಿಂದ ಹೊರಬಂದ ಇಟಲಿ

ರೋಮ್‌: ಚೀನಾಗೆ ಇಟಲಿ ಬಿಗ್‌ ಶಾಕ್‌ ನೀಡಿದೆ. ಚೀನಾದ (China) ಮಹತ್ವಾಕಾಂಕ್ಷೆಯ ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್ (BRI) ಯೋಜನೆಯಿಂದ ಹೊರಬರುವುದಾಗಿ ಇಟಲಿ (Italy) ಅಧಿಕೃತವಾಗಿ ತಿಳಿಸಿದೆ.

ಈಗ ಇಟಲಿ ಅಧಿಕೃತವಾಗಿ ಈ ಯೋಜನೆಯಿಂದ ಹೊರಬರುವುದಾಗಿ ಚೀನಾಗೆ ತಿಳಿಸಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ. 2019ರಲ್ಲಿ ನಡೆದ ಒಪ್ಪಂದವು ಮಾರ್ಚ್ 2024 ರಲ್ಲಿ ಮುಕ್ತಾಯಗೊಳ್ಳುತ್ತದೆ. ರೋಮ್ ಕನಿಷ್ಠ ಮೂರು ತಿಂಗಳ ಮೊದಲೇ ಲಿಖಿತವಾಗಿ ತಿಳಿಸದೇ ಇದ್ದರೆ ಅದು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ. ಈಗ ಈ ಒಪ್ಪಂದವನ್ನು ನವೀಕರಿಸುವುದಿಲ್ಲಎಂದು ಇಟಲಿ ಚೀನಾಗೆ ಇತ್ತೀಚಿಗೆ ಪತ್ರದ ಮೂಲಕ ತಿಳಿಸಿದೆ ಎಂದು ವರದಿಯಾಗಿದೆ.

ಚೀನಾದ ಈ ಯೋಜನೆಗೆ  2019ರಲ್ಲಿ ಇಟಲಿ ಸಹಿ ಹಾಕಿತ್ತು.  ಬಿಆರ್‌ಐ ಸೇರಿದ ಏಕೈಕ ಪಾಶ್ಚಿಮಾತ್ಯ ದೇಶ ಇಟಲಿಯಾಗಿತ್ತು. ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಇಟಲಿ ಈ ಯೋಜನೆಯಿಂದ ಹಿಂದಕ್ಕೆ ಸರಿಯಲಿದೆ ಎಂಬ ವಿಚಾರ ಕೆಲ ತಿಂಗಳಿಂದ ಸುದ್ದಿಯಾಗುತ್ತಿತ್ತು. ಇದನ್ನೂ ಓದಿ: ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ!

ನಾವು ಇನ್ನು ಮುಂದೆ ಬಿಆರ್‌ಐ ಭಾಗವಾಗಿರದಿದ್ದರೂ ಸಹ ಚೀನಾದೊಂದಿಗೆ ಅತ್ಯುತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವ ಎಲ್ಲಾ ಉದ್ದೇಶವನ್ನು ನಾವು ಹೊಂದಿದ್ದೇವೆ. ಇತರ ಜಿ7 ರಾಷ್ಟ್ರಗಳು ಚೀನಾದೊಂದಿಗೆ ನಮಗಿಂತಲೂ ಉತ್ತಮ ಸಂಬಂಧವನ್ನು ಹೊಂದಿದ್ದರೂ ಆ ದೇಶಗಳು ಬಿಆರ್‌ಐ ಯೋಜನೆಯ ಭಾಗವಾಗಿಲ್ಲ ಎಂದು ಇಟಲಿಯ ಸರ್ಕಾರಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ಪ್ರಧಾನಿಯಾಗಿ ಜಾರ್ಜಿಯಾ ಮೆಲೋನಿ (Giorgia Meloni) ಅಧಿಕಾರ ವಹಿಸಿಕೊಂಡ ಬಳಿಕ ಚೀನಾವನ್ನು ಪಶ್ಚಿಮಕ್ಕೆ ಸಂಪರ್ಕಿಸುವ ಈ ಯೋಜನೆಯಿಂದ ಇಟಲಿಗೆ ಯಾವುದೇ ಗಮನಾರ್ಹ ಲಾಭ ಇಲ್ಲ.  ಈ ಒಪ್ಪಂದದಿಂದ ಹಿಂದೆ ಸರಿಯಲು ಬಯಸುವುದಾಗಿ ಹೇಳಿದ್ದರು.  ಇದನ್ನೂ ಓದಿ: ಏನಿದು ಬಿಎಆರ್‌ಐ ಯೋಜನೆ? ಚೀನಾಗೆ ಲಾಭ ಹೇಗೆ? ಭಾರತ ಯಾಕೆ ಸೇರ್ಪಡೆಯಾಗಿಲ್ಲ? ಭಾರತದ ವಿರೋಧ ಯಾಕೆ? ಚೀನಾದ ಯೋಜನೆಗೆ ಪ್ರತಿಯಾಗಿ ಭಾರತ ಏನು ಮಾಡುತ್ತಿದೆ?

ಏನಿದು ಈ ಯೋಜನೆ?
ಸರಳವಾಗಿ ಹೇಳುವುದಾರೆ ರಸ್ತೆ, ರೈಲು, ಹಡಗಿನ ಮೂಲಕ ವಸ್ತುಗಳನ್ನು ಸಾಗಿಸಲು ಆರಂಭವಾದ ಯೋಜನೆ ಒನ್‌ ಬೆಲ್ಟ್‌, ಒನ್‌ ರೋಡ್‌ ಯೋಜನೆ. ಅಂದರೆ ಒಂದು ದೇಶದಲ್ಲಿ ಮೂಲಸೌಕರ್ಯವನ್ನು (Infrastructure) ಅಭಿವೃದ್ಧಿ ಪಡಿಸುವ ಈ ಯೋಜನೆ 2013ರಲ್ಲಿ ಆರಂಭಗೊಂಡಿತು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಕನಸಿನ ಯೋಜನೆ ಇದಾಗಿದ್ದು ಇದಕ್ಕೆ 30, 50 ದೇಶಗಳು ಸೇರಿಲ್ಲ. ರಷ್ಯಾ, ಸೌದಿ ಅರೇಬಿಯಾ, ಕತಾರ್‌, ಇರಾನ್‌, ಅರ್ಜೈಂಟಿನಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಸೇರಿದಂತೆ ಬರೋಬ್ಬರಿ 150 ದೇಶಗಳು ಈ ಮಹತ್ವಾಕಾಂಕ್ಷಿಯೋಜನೆಯ ಸದಸ್ಯ ರಾಷ್ಟ್ರಗಳಾಗಿವೆ. ರಸ್ತೆ, ರೈಲು, ಸೇತುವೆ, ವಿದ್ಯುತ್‌ ಸ್ಥಾವರ, ಬಂದರುಗಳನ್ನು ಈ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಸದಸ್ಯ ರಾಷ್ಟ್ರಗಳಲ್ಲ ಲ್ಯಾಟಿನ್‌ ಅಮೆರಿಕ, ಯುರೋಪ್‌, ಏಷ್ಯಾ, ಆಫ್ರಿಕಾ ದೇಶಗಳೇ ಅಧಿಕವಾಗಿವೆ.

 

ಭಾರತ, ಅಮೆರಿಕ ವಿರೋಧ:
ವಿಶ್ವದ ಹಲವು ರಾಷ್ಟ್ರಗಳು ಸೇರ್ಪಡೆಯಾದರೂ ಭಾರತ (India) ಮತ್ತು ಅಮೆರಿಕ (USA) ಈ ಯೋಜನೆಯನ್ನು ವಿರೋಧಿಸುತ್ತಾ ಬಂದಿದೆ. ಇದು ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸುವ ಯೋಜನೆ ಎಂದೇ ಭಾರತ ಬಣ್ಣಿಸಿದೆ. ಈ ಯೋಜನೆಯ ಭಾಗವಾಗಿದ್ದ ಪಾಕಿಸ್ತಾನ ಮತ್ತು ಶ್ರೀಲಂಕಾ ಈಗಾಗಲೇ ಸಮಸ್ಯೆ ಎದುರಿಸುತ್ತಿದೆ.

ಚೀನಾ ಪಾಕಿಸ್ತಾನ ಎಕಾನಮಿಕ್‌ ಕಾರಿಡಾರ್‌ ಹೆಸರಿನಲ್ಲಿ ಸಾಲ ಪಡೆದುಕೊಂಡಿತ್ತು. ಸದ್ಯ ಅಂದಾಜು 30 ಬಿಲಿಯನ್‌ ಡಾಲರ್‌ ಹಣವನ್ನು ಪಾಕಿಸ್ತಾನ ಚೀನಾಗೆ ಪಾವತಿ ಮಾಡಬೇಕಿದೆ. ಚೀನಾ ಹಣವನ್ನು ಪಾವತಿ ಮಾಡಲು ಕನಿಷ್ಟ 40 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಶ್ರೀಲಂಕಾದ ಹಂಬನ್‌ತೋಟ ಬಂದರನ್ನು ಚೀನಾ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿ ಪಡಿಸಿದರೂ ನಿರೀಕ್ಷಿತ ಪ್ರಮಾಣದ ಲಾಭವಾಗಿಲ್ಲ. ಸಾಲ ಮರುಪಾವತಿ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ 2017ರಲ್ಲಿ 99 ವರ್ಷಗಳ ಕಾಲ ಚೀನಾದ ಚೀನಾ ಮರ್ಚೆಂಟ್‌ ಪೋರ್ಟ್‌ ಹೋಲ್ಡಿಂಗ್‌ ಲೀಸ್‌ಗೆ ನೀಡಲಾಗಿದೆ.

ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಮಲೇಷ್ಯಾ, ಮಾಲ್ಡೀವ್ಸ್‌ ಸೇರಿದಂತೆ ಹಲವು ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಕಾರಣಕ್ಕೆ ಒನ್‌ ರೋಡ್‌, ಒನ್‌ ಬೆಲ್ಟ್‌ ಈಗ Debt-trap Diplomacy ಎಂದೇ ಕುಖ್ಯಾತಿ ಪಡೆದಿದೆ.