ವಕೀಲರ ದೂರಿನಿಂದ ಹಾಸನದಲ್ಲಿ ಐಟಿ ದಾಳಿ!

ಬೆಂಗಳೂರು: ಕಳೆದ ಗುರುವಾರ ರಾಜ್ಯದಲ್ಲಿ ನಡೆದ ಐಟಿ ದಾಳಿಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಕಾರಣರಲ್ಲ. ಬದಲಾಗಿ ವಕೀಲರೊಬ್ಬರಿಂದಾಗಿ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದಾರೆ ಎಂಬ ವಿಚಾರವೊಂದು ಇದೀಗ ಲಭ್ಯವಾಗಿದೆ.

ಹೌದು. ಹಾಸನದ ಭ್ರಷ್ಟ ಗುತ್ತಿಗೆದಾರರ ವಿರುದ್ಧ ವಕೀಲ ದೇವರಾಜೇಗೌಡ ಸುಮಾರು 4 ಸಾವಿರ ಪುಟಗಳ ದಾಖಲೆ ಸಮೇತ ದೂರು ನೀಡಿದ್ದರು. ಈ ದೂರಿನಲ್ಲಿ ಕಾಮಗಾರಿ ಮಾಡದೇ ಹಣ ಮಂಜೂರು ಮಾಡಿಸಿಕೊಳ್ಳುತ್ತಾರೆ ಎಂದು ತಿಳಿಸಲಾಗಿತ್ತು. ದೂರಿನಲ್ಲಿ ಸತ್ಯಾಂಶ ಕಂಡು ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದಿದೆ.

ದೂರಿನಲ್ಲಿ ಪಿಡಬ್ಲ್ಯುಡಿ ಅಧಿಕಾರಿ ಮಂಜುನಾಥ್ ಅಕ್ರಮಗಳಿಗೆ ಪುಟ್ಟರಾಜು ಸಹಕಾರ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಒಂದು ತಿಂಗಳಿನಿಂದ ಐಟಿ ಇಲಾಖೆ ದಾಖಲೆಗಳನ್ನು ಪರೀಶಿಲನೆ ನಡೆಸಿತ್ತು. ಬಳಿಕ ಪುಟ್ಟರಾಜು ಮನೆ ಮೇಲೆಯೂ ಇಲಾಖೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಕೀಲರು, ಹಾಸನ ಜಿಲ್ಲೆಗೆ ಸಂಬಂಧಿಸಿರುವ ಪಿಡಬ್ಲ್ಯುಡಿ ಇಲಾಖೆಯ ಗುತ್ತಿಗೆದಾರರ ಮೇಲೆ ಮಾತ್ರ ಐಟಿ ದಾಳಿ ನಡೆದಿದೆ. ಇದು ಯಾವುದೇ ರಾಜಕೀಯ ದುರುದ್ದೇಶದಿಂದಾದ ದಾಳಿಯಲ್ಲ. ಅಲ್ಲದೆ ಈ ದಾಳಿಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಜಿಲ್ಲೆಯಲ್ಲಿ 1,136. 67 ಕೋಟಿ ರೂ. ಬಿಲ್ ತೆಗೆದುಕೊಂಡಿರುವ ಗುತ್ತಿಗೆದಾರರು ಎಲ್ಲರೂ ಕಳಪೆ ಕಾಮಗಾರಿ ಮಾಡಿದ್ದಾರೆ. ಶೇ.20ರಷ್ಟು ಕಾಮಗಾರಿ ಮಾಡಿ ಶೇ.80ರಷ್ಟು ಹಣವನ್ನು ಲೋಕೋಪಯೋಗಿ ಸಚಿವರಿಗೆ ಪರೋಕ್ಷವಾಗಿ ನೀಡುತ್ತಿದ್ದಾರೆ ಎಂದು ನನ್ನ ಆರೋಪವಿತ್ತು ಎಂದರು.

ಗುತ್ತಿಗೆದಾರರು ಪಡೆದುಕೊಂಡ ಹಣದ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಈ ರಾಜ್ಯದ ಜನತೆಯ ಮುಂದೆ ಇಟ್ಟಿದ್ದೇನೆ. ಅದು ಫಲಕಾರಿಯಾಗದ ಸಂದರ್ಭದಲ್ಲಿ ನಾನು ಐಟಿ ಇಲಾಖೆಯ ಬಾಗಿಲು ತಟ್ಟಿದ್ದು ಸತ್ಯ. ಮುಖ್ಯಮಂತ್ರಿ ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯನವರು ಇದರಲ್ಲಿ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ. ಎಚ್ ಡಿ ರೇವಣ್ಣನವರು ಇಡೀ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಅವರು ಪಿಡಬ್ಲ್ಯುಡಿ ಇಲಾಖೆಯನ್ನು ಬಯಸುತ್ತಾರೆ ಎನ್ನುವುದನ್ನು ನಾವು ಇಲ್ಲಿ ಬಹಳ ಸ್ಪಷ್ಟವಾಗಿ ಅರ್ಥೈಸಿಕೊಳ್ಳಬಹುದು ಎಂದು ತಿಳಿಸಿದ್ರು.

Comments

Leave a Reply

Your email address will not be published. Required fields are marked *