ಕೆಲ ಶಾಸಕರಿಗೆ ಬಿಜೆಪಿ ದುಡ್ಡು ಕೊಟ್ಟಿರುವುದು ಸತ್ಯ: ಸಿದ್ದರಾಮಯ್ಯ

– ಕೊನೆಗೂ ಬಿಜೆಪಿ ಆಫರ್ ಒಪ್ಪಿಕೊಂಡದ್ರ ಕೈ ಶಾಸಕರು?

ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಕಮಲ ಚಾಲ್ತಿಯಲ್ಲಿರುವುದು ಸತ್ಯವಾಗಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ನಮ್ಮ ಶಾಸಕರಿಗೆ 30 ಕೋಟಿ ರೂ. ಆಫರ್ ನೀಡಿದ್ದು, ಕೆಲ ಶಾಸಕರಿಗೆ ಹಣ ಕೊಟ್ಟಿದ್ದಾರೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸದನ ಮುಂದೂಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ ಆರೋಪ ಮಾಡಿದೆ. ಹಾಗಾದರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಲಿ. ಅದನ್ನು ಬಿಟ್ಟು ಸದನದಲ್ಲಿ ಗಲಾಟೆ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಸರ್ಕಾರ ಉರುಳಿಸಲು ಬಿಜೆಪಿ ಕಾಂಗ್ರೆಸ್ ಶಾಸಕರಿಗೆ ಆಫರ್ ನೀಡಿದೆ. ಆದರೆ ಆಪರೇಷನ್ ಕಮಲ ಫೇಲ್ ಆಗಿದೆ. ಹೀಗಾಗಿ ಸದನದಲ್ಲಿ ಧರಣಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸದನದ ಆರಂಭದ ದಿನವೇ ರಾಜ್ಯಪಾಲರ ಭಾಷಣದ ಅಡ್ಡಿ ಪಡಿಸಿದ್ದಾರೆ. ಬಹುಮತ ಇಲ್ಲ ಎಂದು ಘೋಷಣೆ ಕೂಗಿದ್ದಾರೆ. ಸಮ್ಮಿಶ್ರ ಸರ್ಕಾರ ಆರಂಭವಾದ ಸಮಯದಿಂದ ಸರ್ಕಾರ ಉರುಳಿಸುವ ಪ್ರಯತ್ನ ಮಾಡಿರುವ ಬಿಜೆಪಿ ಈಗ ಸದನ ನಡೆಯದಂತೆ ಮಾಡಿದೆ. ಶಾಸಕರಿಗೆ ಆಫರ್ ಕೊಟ್ಟು ಕೆಲ ಶಾಸಕರಿಗೆ ಹಣವನ್ನು ಸಂದಾಯ ಮಾಡಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಹಣ ನೀಡಿದ ಬಿಜೆಪಿ ನಾಯಕರ ಸ್ಥಿತಿ ಸದ್ಯ ಇಂಗು ತಿಂದ ಮಂಗನಂತೆ ಆಗಿದೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ತಾನೂ ಆಶಾವಾದಿ ಎಂದು ಕರೆದುಕೊಂಡ ಸಿದ್ದರಾಮಯ್ಯ ಅವರು, ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿದ್ದು, ಪಕ್ಷದ ಸಭೆಗೆ ಎಲ್ಲರೂ ಹಾಜರಾಗುವ ವಿಶ್ವಾಸವಿದೆ. ಒಂದೊಮ್ಮೆ ಸಭೆಗೆ ಶಾಸಕರು ಗೈರು ಹಾಜರಿ ಆದರೆ ಶಿಸ್ತು ಕ್ರಮದ ತೀರ್ಮಾನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಇಷ್ಟು ದಿನ ಬಿಜೆಪಿ ನಾಯಕರು ಆಫರ್ ಮಾಡಿದ್ದಾರೆ ಎಂದು ಕೇಳಿಕೆ ನೀಡುತ್ತಿದ್ದ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ನಮ್ಮ ಶಾಸಕರಿಗೆ ಹಣ ಸಂದಾಯ ಆಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಶಾಸಕರ ಹೆಸರನ್ನು ರಿವೀಲ್ ಮಾಡುವಂತೆ ಪ್ರಶ್ನಿಸಿದ ಮಾಧ್ಯಮಗಳಿಗೆ ಉತ್ತರಿಸಲು ನಿರಾಕರಿಸಿದ ಸಿದ್ದರಾಮಯ್ಯ ಅವರು, ನಾನು ಯಾಕೆ ಶಾಸಕರ ಹೆಸರು ಹೇಳಬೇಕು. ಸಮಯದ ಬಂದಾಗ ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ. ಬಿಜೆಪಿ ನಾಯಕರು ಡೋಂಗಿಗಳು ಎಂದು ಹೇಳಿ ವಿಷಯಾಂತರ ಮಾಡಿ ಮುಂದೆ ನಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *