ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದು ಉತ್ತಮ: ಕೃಷಿ ಸಚಿವ

ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವುದು ಉತ್ತಮ ಎಂದು ಸಚಿವ ಶಿವಶಂಕರರೆಡ್ಡಿ ಹೇಳಿದ್ದಾರೆ.

ಶಿರಡಿಗೆ ತೆರಳಿದ್ದ ಸಚಿವರು ದೇವರ ದರ್ಶನ ಪಡೆದು ಇಂದು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆಯುವ ಸಂಭವ ಕಡಿಮೆಯಿದೆ. ಈ ರೀತಿಯಾದರೆ ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಧಾನಸಭೆ ವಿಸರ್ಜನೆ ಮಾಡಿದರೆ ಉತ್ತಮವೋ ಅಥವಾ ಬಿಜೆಪಿ ಅಧಿಕಾರಕ್ಕೆ ಬರುವುದು ಸರಿಯೋ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿ ಸರ್ಕಾರ ರಚನೆ ಮಾಡಿದರೆ ಉತ್ತಮ. ಒಂದು ವೇಳೆ ಮರು ಚುನಾವಣೆ ನಡೆದರೆ ಎದುರಿಸಲು ಸಿದ್ಧ ಎಂದರು.

ಇತ್ತ ಮುಖ್ಯಮಂತ್ರಿಗಳು ಸ್ಪೀಕರ್ ಮತ್ತು ಕಾನೂನಿನ ಮೂಲಕ ನಾವು ಸರ್ಕಾರವನ್ನು ಉಳಿಸುತ್ತೇವೆ. ಸಚಿವರು ಆದಷ್ಟು ತಮ್ಮ ವ್ಯಾಪ್ತಿಯ ಶಾಸಕರ ಜೊತೆ ಸಂಪರ್ಕದಲ್ಲೇ ಇರಿ. ಹೇಗೆ ಸರ್ಕಾರ ಉಳಿಯುತ್ತದೆ ಎಂಬ ಚಿಂತೆ ನಿಮಗೆ ಬೇಡ. ಅತೃಪ್ತರ ಓಲೈಕೆಯನ್ನು ಎರಡು ಪಕ್ಷದವರು ಮಾಡುವುದು ಬೇಡ ಎಂದು ಕ್ಯಾಬಿನೆಟ್ ಸಭೆಯಲ್ಲಿ ಭರವಸೆ ನೀಡಿದ್ದಾರೆ.

ಸ್ಪೀಕರ್ ಮತ್ತು ಕಾನೂನಿನಿಂದ ಸರಕಾರಕ್ಕೆ ದೊಡ್ಡ ರಿಲೀಫ್ ಸಿಗಲಿದೆ. ಯಾವುದೇ ಸಮಸ್ಯೆ ಆಗದ ರೀತಿ ಅಧಿವೇಶನ ನಡೆಯುತ್ತದೆ. ಬಿಜೆಪಿಯವರ ಜೊತೆ ಆಕ್ರೋಶಕ್ಕೆ ಯಾರು ಇಳಿಯಬೇಡಿ. ಎಲ್ಲರೂ ಒಗ್ಗಟ್ಟಾಗಿ ಇರಿ. ಇದೇ ನೀವು ಮಾಡುವ ದೊಡ್ಡ ಸಹಾಯ ಅಂತ ಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಕೇಳಿ ಬಂದಿದೆ.

ಬಹಳ ಮಂದಿಗೆ ಇದೇ ಕೊನೆಯ ಕ್ಯಾಬಿನೆಟ್ ಎಂದುಕೊಂಡಿದ್ದೀರಲ್ಲ ಎಂದು ಸಚಿವರನ್ನು ನಗುತ್ತಲೇ ಪ್ರಶ್ನಿಸಿದ ಸಿಎಂ, ಇದು ಕೊನೆ ಸಭೆ ಅಲ್ಲ. ಸರ್ಕಾರ ಸೇಫ್ ಆಗಿ ಇನ್ನೂ ಬಹಳಷ್ಟು ಕ್ಯಾಬಿನೆಟ್ ಸಭೆ ನಡೆಸುತ್ತೇನೆ ಎಂದು ತಮ್ಮದೇ ಧಾಟಿಯಲ್ಲಿ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *