ಪುಲ್ವಾಮಾದಂತಹ ದಾಳಿ ನಡೆಯುತ್ತಲೇ ಇರುತ್ತೆ, ಪಾಕ್ ಮೇಲೆ ವಿಮಾನ ದಾಳಿ ನಡೆಸಿದ್ದು ಸರಿಯಲ್ಲ: ಸ್ಯಾಮ್ ಪಿತ್ರೋಡಾ

ನವದೆಹಲಿ: 8 ಮಂದಿ ಎಸಗಿದ ಕೃತ್ಯಕ್ಕೆ ಇಡೀ ಪಾಕಿಸ್ತಾನವನ್ನು ದೂಷಿಸುವುದು ಸರಿಯಲ್ಲ ಎಂದು ರಾಹುಲ್ ಗಾಂಧಿ ಆಪ್ತ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಮಾಧ್ಯಮ ಸಂಸ್ಥೆಯ ಜೊತೆ ಮಾತನಾಡಿದ ಅವರು, ಮುಂಬೈ ದಾಳಿ ವಿಚಾರವನ್ನು ಪ್ರಸ್ತಾಪಿಸಿ ಅಲ್ಲಿಂದ ಬಂದ 8 ಮಂದಿ ಇಲ್ಲಿ ಕೃತ್ಯ ಎಸಗಿದ್ದನ್ನು ಪರಿಗಣಿಸಿ ಪಾಕಿಸ್ತಾನವನ್ನು ಸಂಪೂರ್ಣವಾಗಿ ದೂಷಣೆ ಮಾಡುವುದು ಸರಿಯಲ್ಲ. ಈ ವಿಚಾರದಲ್ಲಿ ನಾನು ನಂಬಿಕೆಯನ್ನು ಇಟ್ಟಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪುಲ್ವಾಮಾ ದಾಳಿ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಈ ರೀತಿಯ ದಾಳಿ ನಡೆಯುತ್ತಲೇ ಇರುತ್ತದೆ. ಮುಂಬೈ ದಾಳಿಯಾದಾಗ ನಾವು ವಿಮಾನವನ್ನು ಪಾಕಿಸ್ತಾನಕ್ಕೆ ಕಳುಹಿಸಬಹುದಿತ್ತು. ಆದರೆ ನನ್ನ ಪ್ರಕಾರ ಇದು ಸರಿಯಾದ ನಿರ್ಧಾರ ಅಲ್ಲ ಎಂದು ಹೇಳಿದರು.

ಬಾಲಕೋಟ್ ಏರ್‌ಸ್ಟ್ರೈಕ್‌ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ದಾಳಿ ನಡೆದಿದೆ ಮತ್ತು 300 ಮಂದಿ ಮೃತಪಟ್ಟಿದ್ದಾರೆ ಎನ್ನುವುದು ಎರಡು ಪ್ರತ್ಯೇಕ ವಿಚಾರ. ಈ ವಿಚಾರದಲ್ಲಿ ನಾವು ಭಾವನಾತ್ಮಕವಾಗಿರಬಾರದು. ನೀವು ಇವತ್ತು ಬಂದು ನಾನು 300 ಮಂದಿಯನ್ನು ಹತ್ಯೆ ಮಾಡಿದ್ದೇನೆ ಎಂದು ಹೇಳಿದರೆ ನಾನು, ಯಾರು ಮೃತಪಟ್ಟಿಲ್ಲ ಎಂದು ವಿಶ್ವ ಹೇಳುತ್ತಿದೆ ಎಂದು ಹೇಳುತ್ತೇನೆ ಎಂದಿದ್ದಾರೆ.

ನಾವು ನಿಜವಾಗಿಯೂ ದಾಳಿ ಮಾಡಿದ್ದೇವಾ? ನಾವು 300 ಮಂದಿಯನ್ನು ಹತ್ಯೆ ಮಾಡಿದ್ದೇವಾ? ಈ ವಿಚಾರದ ಬಗ್ಗೆ ನನಗೆ ಜಾಸ್ತಿ ಗೊತ್ತಿಲ್ಲ. ನಾನೊಬ್ಬ ಪ್ರಜೆಯಾಗಿ ಈ ವಿಚಾರದ ಬಗ್ಗೆ ಪ್ರಶ್ನೆ ಕೇಳುವುದು ನನ್ನ ಕರ್ತವ್ಯ. ಪ್ರಶ್ನೆ ಕೇಳಿದ ಮಾತ್ರಕ್ಕೆ ನಾನು ದೇಶ ವಿರೋಧಿಯಲ್ಲ. ನೀವು 300 ಜನ ಮೃತಪಟ್ಟಿದ್ದಾರೆ ಎಂದು ಹೇಳಿದರೆ ನನಗೆ ವಿಚಾರ ಗೊತ್ತಾಗಬೇಕು. ಭಾರತದ ಪ್ರಜೆಗಳಿಗೆ ಗೊತ್ತಾಗಬೇಕು. ವಿದೇಶದ ಮಾಧ್ಯಮಗಳಲ್ಲಿ ಯಾರು ಮೃತಪಟ್ಟಿಲ್ಲ ಎಂದು ವರದಿಯಾದಾಗ ಭಾರತದ ಪ್ರಜೆಯಾಗಿ ನನಗೆ ಬೇಸರ ಮೂಡುತ್ತದೆ ಎಂದು ತಿಳಿಸಿದರು.

ಈ ವಿಚಾರದ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿದ ಅವರು, ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಹೇಳಿಕೆ ನೀಡುತ್ತಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾನು ಒಬ್ಬ ವಿಜ್ಞಾನಿ. ನಾನು ಡೇಟಾಗಳನ್ನು ನಂಬುತ್ತೇನೆ ಹೊರತು ಭಾವನೆಗಳನ್ನು ನಂಬುವುದಿಲ್ಲ ಎಂದು ಹೇಳಿದರು.

ನಾನೊಬ್ಬ ಗಾಂಧಿವಾದಿಯಾಗಿ ಮತ್ತು ವೈಯಕ್ತಿಕವಾಗಿ ಮಾತುಕತೆಯಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ನನ್ನ ಪ್ರಕಾರ ನಾವು ಎಲ್ಲರ ಜೊತೆ ಮಾತನಾಡಬೇಕು. ಪಾಕಿಸ್ತಾನ ಯಾಕೆ ವಿಶ್ವದ ಜೊತೆಗೆ ನಾವು ಮಾತನಾಡಬೇಕು ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *