ಜಿಸ್ಯಾಟ್ 6ಎ ಉಪಗ್ರಹ ಉಡಾವಣೆ ಯಶಸ್ವಿ: ಏನಿದರ ವಿಶೇಷತೆ? ಸೈನಿಕರಿಗೆ ಹೇಗೆ ಸಹಾಯ ಆಗುತ್ತೆ? ಇಲ್ಲಿದೆ ಮಾಹಿತಿ

ಶ್ರೀಹರಿಕೋಟಾ: ಇಸ್ರೋದ ಜಿಸ್ಯಾಟ್-6ಎ ಉಪಗ್ರಹ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ  ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.

ಸ್ಪೇಸ್ ಸೆಂಟರ್ ನಲ್ಲಿರುವ ಎರಡನೇ ಲಾಂಚ್ ಪ್ಯಾಡ್‍ನಿಂದ ಉಪಗ್ರಹವನ್ನು ಹೊತ್ತ ಜಿಎಸ್‍ಎಲ್‍ವಿ ಎಫ್8 ರಾಕೆಟ್ ಇಂದು ಸಂಜೆ 4.56ಕ್ಕೆ ನಭಕ್ಕೆ ಚಿಮ್ಮಿತು. ಉಡಾವಣೆಯಾದ 17 ನಿಮಿಷಕ್ಕೆ ಸರಿಯಾಗಿ ಉಪಗ್ರಹ 36,000 ಕಿ.ಮೀ ಎತ್ತರದಲ್ಲಿರುವ ನಿಗದಿತ ಕಕ್ಷೆಯನ್ನು ತಲುಪಿತು. ಈ ವರ್ಷ ಇಸ್ರೋ ಉಡಾಯಿಸಿದ 2ನೇ ಉಪಗ್ರಹ ಇದಾಗಿದ್ದು ಅತ್ಯಂತ ಶಕ್ತಿಶಾಲಿ ಸಂವಹನ ಉಪಗ್ರಹವಾಗಿದೆ.

ಈ ಉಪಗ್ರಹ ಸುಮಾರು 2 ಟನ್ ತೂಕವಿದ್ದು, ಇದರ ನಿರ್ಮಾಣಕ್ಕಾಗಿ ಇಸ್ರೋ 270 ಕೋಟಿ ರೂ. ವೆಚ್ಚ ಮಾಡಿದೆ. 400ಕ್ಕೂ ಹೆಚ್ಚು ವಿಜ್ಞಾನಿಗಳು ಈ ಉಪಗ್ರಹ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು.

161 ಅಡಿ ಎತ್ತರವನ್ನು ಹೊಂದಿದ್ದ ಜಿಎಸ್‍ಎಲ್‍ವಿ ರಾಕೆಟ್‍ಗೆ ಸ್ವದೇಶಿ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಲಾಗಿದೆ. ಜಿಸ್ಯಾಟ್ 6ಎ ಎಸ್ ಬ್ಯಾಂಡ್ ಸಂವಹನ ಉಪಗ್ರಹ ಸರಣಿಯ ಎರಡನೇ ಉಪಗ್ರಹವಾಗಿದೆ. ಜಿಸ್ಯಾಟ್6 2015ರ ಆಗಸ್ಟ್ ನಲ್ಲಿ ಉಡಾವಣೆ ಮಾಡಲಾಗಿತ್ತು. ಇದನ್ನೂ ಓದಿ: ಏನಿದು ಕ್ರಯೋಜನಿಕ್ ಎಂಜಿನ್?

ಉಪಗ್ರಹದ ವಿಶೇಷತೆ ಏನು?
ಈ ಉಪಗ್ರಹ 6 ಮೀ. ಉದ್ದದ ಎಸ್-ಬ್ಯಾಂಡ್ `ಸ್ವಯಂ ಚಾಲಿತ’ ಹರಡಿಕೊಳ್ಳುವ ಆ್ಯಂಟೆನಾ ಇದರ ವಿಶೇಷ. ಕಕ್ಷೆಗೆ ಸೇರುತ್ತಲೇ ಇದು ಛತ್ರಿಯಂತೆ ಹರಡಿಕೊಳ್ಳುತ್ತದೆ. ಈವರೆಗೆ ಇಸ್ರೋ ಅಳವಡಿಸಿರುವ ಆ್ಯಂಟೆನಾಗಳಿಗಿಂತಾ ಮೂರು ಪಟ್ಟು ದೊಡ್ಡದಾಗಿರುವುದು ಇದರ ವಿಶೇಷತೆ.

ಎಸ್-ಬ್ಯಾಂಡ್ ವಿಶೇಷತೆ?
ವಿದ್ಯುತ್ಕಾಂತೀಯ ಮಾದರಿಯ 2 ರಿಂದ 4 ಗಿಗಾ ಹಟ್ರ್ಸ್ ವರೆಗಿನ ತರಂಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಈ ಉಪಗ್ರಹ ಹೊಂದಿದೆ. ಈ ಉಪಗ್ರಹದ ಜೀವಿತಾವಧಿ 10 ವರ್ಷ. ಜಾಗತಿಕವಾಗಿ 4ಜಿ ಮೊಬೈಲ್ ಸೇವೆ ಪಡೆಯಲು 2.5 ಗಿಗಾಹರ್ಟ್ಸ್ ಬ್ಯಾಂಡ್ ಬಳಸಲಾಗುತ್ತದೆ. ಮೊಬೈಲ್ ಬ್ರಾಡ್‍ಬ್ಯಾಂಡ್ ಗೆ ಎಸ್ ಬ್ಯಾಂಡ್ ಸ್ಪೆಕ್ಟ್ರಾಂ ಬಳಕೆ ಮಾಡಲಾಗುತ್ತದೆ.

ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆ?
ಸೈನಿಕರಿಗೆ ವಾಯ್ಸ್ ಮತ್ತು ವಿಡಿಯೋ ಡೇಟಾಗಳನ್ನು ಸುಲಭವಾಗಿ ಸಂವಹನ ಮಾಡಲು ಈ ಉಪಗ್ರಹ ಸಹಕಾರಿಯಾಗಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ(ಡಿಆರ್‌ಡಿಒ) ಈಗಾಗಲೇ ಕೈಯಲ್ಲಿ ಬಳಸುವ ಹಲವು ಸಾಧನಗಳನ್ನು ಅಭಿವೃದ್ಧಿ ಪಡಿಸಿದೆ. ಮುಂದಿನ ದಿನಗಳಲ್ಲಿ ಈ ಉಪಗ್ರಹವನ್ನು ಆಧಾರಿಸಿ ಕೆಲಸ ಮಾಡಬಲ್ಲ ಮತ್ತಷ್ಟು ಸಾಧನಗಳನ್ನು ಅಭಿವೃದ್ಧಿ ಪಡಿಸಲಿದೆ.

Comments

Leave a Reply

Your email address will not be published. Required fields are marked *