ಮಾನವ ಸಹಿತ ಬಾಹ್ಯಾಕಾಶ ಪ್ರಯಾಣ ಮತ್ತಷ್ಟು ಹತ್ತಿರ: ಇಸ್ರೋ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಕನಸಿನ ಯೋಜನೆ `ಮಾನವ ಸಹಿತ ಬಾಹ್ಯಾಕಾಶ ಪಯಣ’ ಮತ್ತಷ್ಟು ಹತ್ತಿರವಾಗಿದ್ದು, ಇಸ್ರೋ ನಡೆಸಿದ ಪರೀಕ್ಷೆ ಅಭೂತಪೂರ್ವ ಯಶಸ್ಸು ಸಾಧಿಸಿದೆ.

ಇಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ ಬೆಳಿಗ್ಗೆ 7 ಗಂಟೆಗೆ ಇಸ್ರೋ ಈ ಪರೀಕ್ಷೆ ಮಾಡಿದ್ದು, ನಿರೀಕ್ಷೆಯಂತೆಯೇ ನೌಕೆ ಉಡಾವಣಾ ವಾಹಕದಿಂದ ಬೇರ್ಪಟ್ಟು ಪ್ಯಾರಾಚೂಟ್ ಗಳ ಮೂಲಕ ಸುರಕ್ಷಿತವಾಗಿ ಭೂಮಿಗೆ ಇಳಿದಿದೆ.

ಭವಿಷ್ಯದಲ್ಲಿ ಮಾನವರನ್ನು ಬಾಹ್ಯಕಾಶಕ್ಕೆ ಕಳುಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಮುಂದಾಗಿರುವ ಇಸ್ರೋ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು ಯಾನಿಗಳ ಮಾದರಿಗಳನ್ನು ಹೊತ್ತ ನೌಕೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಬಾಹ್ಯಾಕಾಶ ಪಯಣದ ವೇಳೆ ತುರ್ತು ಪರಿಸ್ಥಿತಿಯಲ್ಲಿ ತುರ್ತು ನಿರ್ಗಮನ ಮಾಡುವುದು ಹೇಗೆ ಎಂಬ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ.

ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾದ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ ಶಿವನ್, ನೌಕೆಯನ್ನು ರಾಕೆಟ್ ಇಂಜಿನ್‍ಗೆ ನೌಕೆಯನ್ನು  ಜೋಡಣೆಮಾಡಲಾಗಿತ್ತು. ಈ ನೌಕೆಯಲ್ಲಿ ಅಂತರಿಕ್ಷ ಯಾನಿಗಳ ದೇಹದ ಮಾದರಿಗಳನ್ನು ಇರಿಸಿ ಉಡಾವಣೆ ಮಾಡಲಾಯಿತು. ಕೆಲವೇ ಕ್ಷಣಗಳಲ್ಲಿ ರಾಕೆಟ್‍ನಿಂದ ಬೇರ್ಪಟ್ಟ ನೌಕೆ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಲಾಯಿತು ಎಂದು ಹೇಳಿದರು.

ಪ್ರಯೋಗಾರ್ಥವಾಗಿ ನಡೆದ ಪರೀಕ್ಷೆ ಯಶಸ್ವಿಯಾಗಿದ್ದು, 259 ಸೆಕೆಂಡ್‍ಗಳ ಕಾಲ ನಡೆದ ಪರೀಕ್ಷೆಯ ಯಶಸ್ವಿನೊಂದಿಗೆ ಮುಂದಿನ ದಿನಗಳಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಹಾಯಕವಾಗುತ್ತದೆ. ಅಂತರಿಕ್ಷಯಾನಕ್ಕೆ ಇನ್ನಷ್ಟು ಹಾದಿ ಸುಗಮವಾಗಿದೆ. ಉಡಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ನೌಕೆ ಒಳಗಿನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ನಿಟ್ಟಿನಲ್ಲಿ ನಡೆಸಿದ ಮೊದಲ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

1962ರಲ್ಲಿ ಪ್ರಾರಂಭಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಳ್ಳಲು ಹಲವಾರು ಪ್ರಯೋಗಗಳನ್ನು ನಡೆಸುತ್ತಾ ಬಂದಿದೆ. ವಿಶ್ವದಲ್ಲಿ ಇಲ್ಲಿಯವರೆಗೂ ಕೇವಲ ಮೂರು ರಾಷ್ಟ್ರಗಳಾದ ರಷ್ಯಾ, ಅಮೆರಿಕ ಹಾಗೂ ಚೀನಾವು ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಂಡಿದ್ದವು. ಇಂದು ನಡೆದ ಪ್ರಯೋಗ ಯಶಸ್ವಿಯಾಗಿದ್ದರಿಂದ ಭಾರತದ ಮಾನವಸಹಿತ ಅಂತರಿಕ್ಷ ಯಾನದ ಕನಸು ನನಸಾಗುವ ಸಮಯಯ ಸನ್ನಿಹಿತವಾಗಿದೆ.

 

Comments

Leave a Reply

Your email address will not be published. Required fields are marked *