ಸರಣಿ ಬಾಂಬ್ ಸ್ಫೋಟಕ್ಕೆ ಯತ್ನಿಸಿದ್ದ 10 ಮಂದಿ ಉಗ್ರರು ಅರೆಸ್ಟ್

– ಭಾರೀ ವೆಚ್ಚದ ಸ್ಫೋಟಕ, ರಾಕೆಟ್, 100 ಮೊಬೈಲ್ ಫೋನ್, 135 ಸಿಮ್ ಕಾರ್ಡ್ ವಶ

ನವದೆಹಲಿ: ಉತ್ತರ ಪ್ರದೇಶ ಹಾಗೂ ನವದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ 10 ಮಂದಿ ಶಂಕಿತ ಐಸಿಸ್ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಬಂಧಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಇಂದು ಮಾಹಿತಿ ನೀಡಿದ ಎನ್‍ಐಎ ಅಧಿಕಾರಿಗಳು, ಬಂಧಿತರು ಐಸಿಸ್ ಜೊತೆಗೆ ಸಂಪರ್ಕ ಹೊಂದಿರುವ ‘ಹರ್ಕತ್ ಉಲ್ ಹರ್ಬ್ ಎ ಇಸ್ಲಾಂ’ ಉಗ್ರ ಸಂಘಟನೆಯ ಸದಸ್ಯರು. ಶಂಕೆ ವ್ಯಕ್ತವಾಗಿದ್ದರಿಂದ ಒಟ್ಟು 16 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರಲ್ಲಿ 10 ಜನರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸರಣಿ ಬಾಂಬ್ ಸ್ಫೋಟದ ಪ್ಲಾನ್ ಕುರಿತು ಬಾಯಿಬಿಟ್ಟಿದ್ದಾರೆ ಎಂದು ತಿಳಿಸಿದರು.

ಎಲ್ಲೆಲ್ಲಿ ಸ್ಫೋಟಕ್ಕೆ ಪ್ಲಾನ್?:
ಉತ್ತರ ಪ್ರದೇಶ ಹಾಗೂ ದೆಹಲಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಉಗ್ರರು, 17 ಕಡೆಗಳಲ್ಲಿ ಬಾಂಬ್ ಸ್ಫೋಟಕ್ಕೆ ಪ್ಲಾನ್ ರೂಪಿಸಿದ್ದರು. ಅವುಗಳಲ್ಲಿ ಉತ್ತರ ಪ್ರದೇಶದ ಅಮ್ರೋಹ, ಹಾಪೂರ್, ಮೀರತ್ ಹಾಗೂ ಲಕ್ನೋ ಸೇರಿದಂತೆ ದೆಹಲಿಯ ಸೀಲಂಪುರ್ ನಲ್ಲಿ ಬಾಂಬ್ ದಾಳಿ ಮಾಡಲು ಪ್ಲಾನ್ ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದರು.

ಬಂಧಿತರಿಂದ ಭಾರೀ ವೆಚ್ಚದ ಸ್ಫೋಟಕ ಸಾಮಾಗ್ರಿಗಳು, ಶಸ್ತ್ರಾಸ್ತ್ರ ಹಾಗೂ ರಾಕೆಟ್, 100 ಮೊಬೈಲ್ ಫೋನ್, 135 ಸಿಮ್ ಕಾರ್ಡ್‍ಗಳು, ಲ್ಯಾಪ್‍ಟಾಪ್‍ಗಳು ಹಾಗೂ 7.5 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಐದು ಜನರ ಬಂಧನಕ್ಕೆ ಅಮ್ರೋಹದಲ್ಲಿರು ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಇನ್ಸ್‌ಪೆಕ್ಟರ್ ಅಸಿಮ್ ಅರುಣ್ ಅವರ ಸಹಾಯ ಪಡೆಯಲಾಗಿತ್ತು. ಈ ಮೂಲಕ ಶಂಕಿತ 6 ಜನರನ್ನು ವಶಕ್ಕೆ ಪಡೆದು, 10 ಜನರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಹರ್ಕತ್ ಉಲ್ ಹರ್ಬ್ ಎ ಇಸ್ಲಾಂ’ ಗುಂಪು ಪ್ರಮುಖ ರಾಜಕಾರಣಿಗಳು ಹಾಗೂ ಗಣ್ಯರನ್ನು ಹತ್ಯೆ ಮಾಡಲು ಸಂಚು ರೂಪಿಸಿತ್ತು. ಈ ಸಂಘಟನೆಯ ಸದಸ್ಯರು ಭದ್ರತಾ ವಲಯ, ಪ್ರಸಿದ್ಧ ಸ್ಥಳದಲ್ಲಿ ಬಾಂಬ್ ಸ್ಫೋಟ ಮಾಡಲು ಸಂಚು ರೂಪಿಸಿದ್ದರು. ಅಷ್ಟೇ ಅಲ್ಲದೆ ಸರಣಿ ಬಾಂಬ್ ದಾಳಿಯ ಬಳಿಕ ರಿಮೋಟ್ ಕಂಟ್ರೋಲ್ ಬಾಂಬ್ ಹಾಗೂ ಆತ್ಮಹತ್ಯಾ ಬಾಂಬ್ ಸ್ಫೋಟಕ್ಕೆ ಭಾರೀ ಸಿದ್ಧತೆ ನಡೆಸಿದ್ದರು ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಈ ಸಂಘಟನೆಯ ನಾಯಕ ಉತ್ತರ ಪ್ರದೇಶದ ಮುಫ್ತಿ ಸೊಹೈಲ್. ಇವನು ಐಸಿಸ್ ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದು, ದೆಹಲಿಯಲ್ಲಿ ಮಸೀದಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಎನ್‍ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *