ನಿಮ್ಮ ಅಧಿಕಾರವಧಿಯಲ್ಲಿ ಹಿಂದೂಗಳಿಗೆ ಬದುಕುವ ಹಕ್ಕಿಲ್ಲವೇ: ಸಿಎಂಗೆ ಶೋಭಾ ಪ್ರಶ್ನೆ

ಕಾರವಾರ: ಇದೀಗ ಗಲಭೆಗಳು ದಕ್ಷಿಣ ಕನ್ನಡದಿಂದ ಉತ್ತರ ಕನ್ನಡ ಜಿಲ್ಲೆಗೆ ವ್ಯಾಪಿಸಿದೆ. ಇದೇ ರೀತಿ ಹಿಂದೂಗಳ ವಿರುದ್ಧ ದಬ್ಬಾಳಿಕೆ ನಡೆದರೆ ಭಟ್ಕಳದಲ್ಲಿ ಕುಳಿತು ಪ್ರತಿಭಟಿಸುತ್ತೇವೆ. ನಿಮ್ಮ ಅಧಿಕಾರದ ಅವಧಿಯಲ್ಲಿ ಹಿಂದೂಗಳಿಗೆ ಬದುಕುವ ಹಕ್ಕಿಲ್ಲವೇ ಎಂದು ಸಂಸದೆ ಶೋಭಾಕರಂದ್ಲಾಜೆ ಸಿಎಂ ಅವರನ್ನು ಪ್ರಶ್ನಿಸಿದ್ದಾರೆ.

ನಾವು ಹಿಂದುಗಳ ರಕ್ಷಣೆಗೆ ಬದ್ಧರಿದ್ದೇವೆ. ವ್ಯಕ್ತಿಗಳನ್ನು ಕಳೆದುಕೊಂಡವರು ನಾವೇ, ಕೇಸು ಎದುರಿಸುವವರು ನಾವೇ, ಜೈಲಿಗೆ ಹೋಗುವವರು ನಾವೇ ಇದು ಸರ್ಕಾರದ ಪಾಲಿಸಿ. ನಮ್ಮ ಕಾರ್ಯಕರ್ತರಿಗೆ ಧೈರ್ಯ ತುಂಬಲು ನಾನು ಇಲ್ಲಿಗೆ ಬಂದಿದ್ದೇನೆ. ಭಟ್ಕಳವನ್ನು ಮೊತ್ತೊಂದು ಕಲ್ಲಡ್ಕ ಆಗುವಂತೆ ಮಾಡಬೇಡಿ ಅಂತ ಅವರು ಆಕ್ರೋಶ ವ್ಯಕ್ತಪಡಿಸಿದ್ರು.

ಇದೇ ತಿಂಗಳು 12 ರಂದು ಭಟ್ಕಳದಲ್ಲಿ ಪುರಸಭೆ ಮಳಿಗೆ ತೆರವನ್ನು ಖಂಡಿಸಿ ರಾಮಚಂದ್ರ ನಾಯ್ಕ ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಭಟ್ಕಳ ಪ್ರಕ್ಷುಬ್ಧವಾಗಿದ್ದು ಗಲಭೆಗೆ ಕುಮ್ಮಕ್ಕು ನೀಡಿದ್ದ 11 ಜನರನ್ನು ಬಂಧಿಸಲಾಗಿದೆ. ಬಂಧಿಸಿದವರಲ್ಲಿ ಬಿಜೆಪಿ ಕಾರ್ಯಕರ್ತರಾಗಿದ್ದು ದರೋಡೆ ಕೇಸು ಹಾಕುವ ಮೂಲಕ ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಅಂತ ಕಿಡಿಕಾರಿದ್ರು.

ಚುನಾವಣೆ ಹತ್ತಿರ ಬಂದಿದ್ದರಿಂದ ಅಲ್ಪಸಂಖ್ಯಾತರನ್ನು ಓಲೈಸಲು ಹಿಂದೂಗಳ ವಿರುದ್ಧ ಅಧಿಕಾರಿಗಳನ್ನು ಚೂಬಿಟ್ಟು ಬಂಧಿಸುವ ಕೆಲಸ ಮಾಡುವ ಜೊತೆಗೆ ಕೋಮುಗಲಭೆ ಸೃಷ್ಟಿಸಿ ಮತ ಪಡೆಯಲು ಸಿದ್ದರಾಮಯ್ಯ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.

ಇನ್ನು ಇದೇ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಸರಕೇರಿಯ ರಾಮಚಂದ್ರ ನಿವಾಸಕ್ಕೆ ಭೇಟಿ ಕೊಟ್ಟು ಮನೆಯವರಿಗೆ ಸಾಂತ್ವನ ಹೇಳಿದ್ರು.

Comments

Leave a Reply

Your email address will not be published. Required fields are marked *