ಸಿಂಧೂರ ಲಕ್ಷ್ಮಣ ಸಿನಿಮಾ ಆಗುತ್ತಾ? ಅಂದುಕೊಂಡಿದ್ದು ನಡೆಯೋದು ಅನುಮಾನ?

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಹಾಗಾಗಿ ಅವರ ಹಳೆಯ ಕನಸೊಂದು ಮತ್ತೆ ಚಿಗುರೊಡೆದ ಬಗ್ಗೆ ಮಾತನಾಡಿದ್ದಾರೆ. ನಿನ್ನೆಯಷ್ಟೇ ಹಾಸ್ಯನಟ ಚಿಕ್ಕಣ್ಣಗಾಗಿ ಸಿನಿಮಾ ಶುರು ಮಾಡಿರುವ ಅವರು, ಈಗಾಗಲೇ ಹೇಳಿಕೊಂಡಂತೆ ‘ವೀರ ಸಿಂಧೂರ ಲಕ್ಷ್ಮಣ’ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ. ಕಳೆದೊಂದು ವರ್ಷದಿಂದ ಸುಮ್ಮನೆ ಇದ್ದವರು, ಇದೀಗ ಏಕಾಏಕಿಯಾಗಿ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ ಎಂದಿದ್ದಾರೆ.

ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ಇಷ್ಟೊತ್ತಿಗೆ ಶೂಟಿಂಗ್ ಶುರುವಾಗಿ, ಕೊನೆಯ ಹಂತದ ಚಿತ್ರೀಕರಣದಲ್ಲಿ ಇರಬೇಕಿತ್ತು. ಕನ್ನಡದ ಸ್ಟಾರ್ ನಟರೊಬ್ಬರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಅವರೇ ಲಕ್ಷ್ಮಣನ ಪಾತ್ರ ಮಾಡಲಿದ್ದಾರೆ ಎಂದು ಸುದ್ದಿಯೂ ಆಗಿತ್ತು. ಆ ನಟನಿಗೂ ಮತ್ತು ನಿರ್ಮಾಪಕರಿಗೆ ಮನಸ್ತಾಪದ ಕಾರಣದಿಂದಾಗಿ ಪ್ರಾಜೆಕ್ಟ್ ತಣ್ಣಗಾಯಿತು. ಇದೀಗ ಮತ್ತೆ ಆ ಸಿನಿಮಾವನ್ನು ಮಾಡುವುದಾಗಿ ಉಮಾಪತಿ ನಿನ್ನೆಯಷ್ಟೇ ಹೇಳಿದ್ದಾರೆ. ಇದನ್ನೂ ಓದಿ: ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

ಈ ಸಿನಿಮಾ ನಿರ್ದೇಶನ ಮಾಡಬೇಕಾಗಿದ್ದು ತರುಣ್ ಸುಧೀರ್. ತರುಣ್ ಅವರ ತಂದೆ ನಟ ಸುಧೀರ್ ಅವರು ಸಿಂಧೂರ ಲಕ್ಷ್ಮಣ ಪಾತ್ರದ ಮೂಲಕ ರಂಗಭೂಮಿಯಲ್ಲಿ ಫೇಮಸ್ ಆದವರು. ಹಾಗಾಗಿ ಈ ಪಾತ್ರವನ್ನು ಯಾರು ಚೆನ್ನಾಗಿ ನಿಭಾಯಿಸಬಲ್ಲರು ಎಂದು ಅವರಿಗೆ ಅಂದಾಜಿತ್ತು. ಹಾಗಾಗಿ ಸ್ಟಾರ್ ನಟನನ್ನೇ ಆಯ್ಕೆ ಮಾಡಿಕೊಂಡರು. ಆಮೇಲೆ ಅದೇನಾಯಿತೋ? ಈ ಸಿನಿಮಾವನ್ನು ಬಿಟ್ಟು, ಅದೇ ನಟರಿಗೆ ಮತ್ತೊಂದು ಕಥೆ ಬರೆದುಕೊಂಡರು ತರುಣ್. ಹಾಗಾಗಿ ಸಿಂಧೂರ ಲಕ್ಷ್ಮಣ ಸದ್ಯಕ್ಕಂತೂ ಅನುಮಾನ.

ಈ ಸಿನಿಮಾ ಮೂಡಿ ಬಂದರೆ, ಒಂದೊಳ್ಳೆ ಸಿನಿಮಾ ಆಗುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದೇ ಸದ್ಯಕ್ಕಿರುವ ಗೊಂದಲ. ಈ ಗೊಂದಲ ನಿವಾರಣೆ ಆಗುವುದು ತೀರಾಕಷ್ಟ. ಯಾಕೆಂದರೆ, ಸಂಬಂಧಗಳು ಅಷ್ಟೊಂದು ಸರಿ ಹೋಗಿಲ್ಲ. ಹಾಗಾಗಿ ಉಮಾಪತಿ ಬೇರೆ ನಟರಿಗೆ ಈ ಸಿನಿಮಾ ಮಾಡುತ್ತಾರಾ? ಅಥವಾ ಆಗಿರುವ ಗೊಂದಲಗಳನ್ನು ಸರಿ ಮಾಡಿಕೊಂಡು ಆ ಸ್ಟಾರ್ ನಟನ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

Live Tv

Comments

Leave a Reply

Your email address will not be published. Required fields are marked *