– ಇತ್ತ ವ್ಯಕ್ತಿಪೂಜೆ ಬೇಡವೆಂದ ಡಿಕೆಶಿ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಸಂಘರ್ಷ ಮಧ್ಯೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡುವ ಹೇಳಿಕೆ ಕೊಟ್ಟಿದ್ದಾರೆ. ಸತೀಶ್ ಜಾರಕಿಹೊಳಿ (Satish Jarkiholi) ಸಿದ್ದರಾಮಯ್ಯನವರ ಸಮರ್ಥ ಉತ್ತರಾಧಿಕಾರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿ ಪಕ್ಷವನ್ನ ಮುನ್ನಡೆಸ್ತಾರೆ ಅಂತ ಹೇಳುವ ಮೂಲಕ ದೀಪಾವಳಿ ಹಬ್ಬದಂದೇ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ. ಪವರ್ ಶೇರಿಂಗ್ ಗದ್ದಲದ ಸಂದರ್ಭಗಳಲ್ಲೇ ಪರ್ಯಾಯ ನಾಯಕತ್ವದ ದಾಳ ಉರುಳಿಸಿದ ಯತೀಂದ್ರ, ಇದ್ದಕ್ಕಿದ್ದಂತೆ ರ‍್ಯಾಯ ನಾಯಕ ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್‌ನಲ್ಲಿ (Congress) ಸತೀಶ್ ಜಾರಕಿಹೊಳಿಯ ನಾಯಕತ್ವವೂ ಇದೆ ಎಂಬ ಸಂದೇಶ ರವಾನಿಸಿದ್ದಾರೆ.
ಬೆಳಗಾವಿ ಜಿಲ್ಲೆ ರಾಯಭಾಗದ ಕಾರ್ಯಕ್ರಮವೊಂದರಲ್ಲಿ ಯತೀಂದ್ರ, ನಮ್ಮ ತಂದೆಯವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ನಮಗೆ ಮಾರ್ಗದರ್ಶಕರ ಅಗತ್ಯತೆ ಇದೆ. ಸತೀಶ್ ಜಾರಕಿಹೊಳಿ ಮಾದರಿಯಾಗಿ ನಮ್ಮನ್ನು ಮುನ್ನಡೆಸುತ್ತಾರೆ ಎಂದು ಹೇಳಿದ್ದಾರೆ. ಈ ಮಾತು ಸಂಚಲನ ಸೃಷ್ಟಿಸುತ್ತಿದ್ದಂತೆಯೇ ಸ್ಪಷ್ಟನೆ ಕೊಟ್ಟ ಯತೀಂದ್ರ, ರಾಜಕೀಯ ಉತ್ತರಾಧಿಕಾರಿ ಬಗ್ಗೆ ಹೇಳಿಲ್ಲ, ಸೈದ್ಧಾಂತಿಕ ಉತ್ತರಾಧಿಕಾರಿ ಬಗ್ಗೆ ಅಷ್ಟೆ ಹೇಳಿದ್ದೇನೆ ಎಂದಿದ್ದಾರೆ.
ಇತ್ತ ಸಿಎಂ ಆಗೋ ಕನಸು ಹೊತ್ತು ಟೆಂಪಲ್ ರನ್ ಮಾಡ್ತಿರೋ ಡಿಸಿಎಂ ಡಿಕೆಶಿಗೂ ಇದು ಮಾರ್ಮಿಕ ಸಂದೇಶವಾಗೋದು ಸುಳ್ಳಲ್ಲ. ಇವತ್ತು ಬೆಳಗ್ಗೆಯಷ್ಟೇ ಡಿಕೆಶಿ ಮಂತ್ರಾಲಯದಲ್ಲಿ ಗುರುರಾಯರ ದರ್ಶನ ಪಡೆದು ಸಂಕಲ್ಪ ಮಾಡಿದ್ರು. ವ್ಯಕ್ತಿ ಪೂಜೆ ಬೇಡ ಅಂದಿರೋ ಡಿಕೆಶಿ, ನಾವು ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗ್ತೀವಿ ಎಂದಿದ್ದಾರೆ.
ಇದು ಒಂದ್ಕಡೆಯಾದ್ರೆ ಸಿದ್ದರಾಮಯ್ಯ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗ್ತಿದೆ. ಸಿದ್ದರಾಮಯ್ಯ ನಂತರ ಯಾರು ಅಹಿಂದ ನಾಯಕರು ಯಾರು? ಉತ್ತರ ಈಗ ಸಿಕ್ಕಿದೆ. ಅದುವೆ ಏಕೈಕ ನಾಯಕ ಪ್ರಿಯಾಂಕ್ ಖರ್ಗೆ ಅಂತಾ ಪೋಸ್ಟ್ ಹಾಕಲಾಗಿದೆ.
