ಮಂಡ್ಯ: ನಟಿ ರಮ್ಯಾ ರಾಜ್ಯ ರಾಜಕಾರಣಕ್ಕೆ ಆಗಮಿಸಿ ಮುಂಬರುವ ಚುನಾವಣೆಯಲ್ಲಿ ಮಂಡ್ಯದ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ.
ರಮ್ಯಾ ಮತ್ತು ಅಂಬರೀಷ್ ಇಬ್ಬರೂ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರಿಂದ ಅಂಬರೀಷ್ ಮತ್ತು ರಮ್ಯಾ ನಡುವೆ ಶೀತಲ ಸಮರ ಶುರುವಾಗಿದೆ. ಶೀತಲ ಸಮರದಿಂದ ಮಂಡ್ಯದಲ್ಲಿ ಕಾಂಗ್ರೆಸ್ ನೆಲಕಚ್ಚೋದು ಖಚಿತ ಎಂಬ ಮಾತು ಜಿಲ್ಲೆಯಲ್ಲಿ ಕೇಳಿಬಂದಿತ್ತು.
ಇದಕ್ಕೆ ಮಾಸ್ಟರ್ ಪ್ಲಾನ್ ಮಾಡುತ್ತಿರುವ ಕಾಂಗ್ರೆಸ್, ಅಂಬರೀಷ್ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಿ ರಮ್ಯಾಗೆ ಮೇಲುಕೋಟೆ ಕ್ಷೇತ್ರದ ಟಿಕೆಟ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಏಕೆಂದರೆ ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ರೈತ ಸಂಘ ಪ್ರಬಲ ಪಕ್ಷಗಳಾಗಿವೆ. ಒಂದು ವೇಳೆ ಮೇಲುಕೋಟೆ ಕ್ಷೇತ್ರದಿಂದ ರಮ್ಯಾ ಅವರಿಗೆ ಟಿಕೆಟ್ ನೀಡಿದರೆ ಅಲ್ಲಿ ಕಾಂಗ್ರೆಸ್ ಗೆ ಬಲ ತುಂಬಿದಂತಾಗುತ್ತೆ.

ಅಷ್ಟೇ ಅಲ್ಲದೇ ಮಂಡ್ಯ ಸಂಸದರಾಗಿರುವ ಪುಟ್ಟರಾಜು ಕಳೆದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರನ್ನು ಸೋಲಿಸಿದ್ದರು. ಇದೀಗ ಮತ್ತೆ ಸಂಸದ ಪುಟ್ಟರಾಜು ಅವರು ಮೇಲುಕೋಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ನಿಂದ ರಮ್ಯಾ ಅವರಿಗೆ ಟಿಕೆಟ್ ನೀಡಿದರೆ ಕಳೆದ ಲೋಕಸಭಾ ಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ರಮ್ಯಾ ಅವರಿಗೆ ಉತ್ತಮ ಅವಕಾಶ ಎನ್ನಲಾಗುತ್ತಿದೆ. ಇದಕ್ಕೆ ರಮ್ಯಾ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಜೊತೆಗೆ ಜಿಲ್ಲೆಯಲ್ಲಿ ಅಂಬರೀಷ್ ಮತ್ತು ರಮ್ಯಾ ಇಬ್ಬರೂ ಸ್ಪರ್ಧಿಸೋದ್ರಿಂದ ಕಾಂಗ್ರೆಸ್ ಒಳ ಜಗಳಕ್ಕೆ ಫುಲ್ ಸ್ಟಾಪ್ ಬಿದ್ದು, ಜೆಡಿಎಸ್ ನಾಗಾಲೋಟವನ್ನು ತಪ್ಪಿಸಬಹುದು ಎಂಬುದು ಕಾಂಗ್ರೆಸ್ ನ ಲೆಕ್ಕಾಚಾರವಾಗಿದೆ.
https://www.youtube.com/watch?v=8VR-KdTHelg
https://www.youtube.com/watch?v=lbFsTiNrw1s





Leave a Reply