ಚುನಾವಣೆ ಗೆಲ್ಲಲು ಇಮ್ರಾನ್, ಮೋದಿ ಮಧ್ಯೆ ರಹಸ್ಯ ಒಪ್ಪಂದ: ಕೇಜ್ರಿವಾಲ್

ನವದೆಹಲಿ: ನಮೋ ಚಾನೆಲ್‍ಗೆ ಪಾಕಿಸ್ತಾನ ಹಣ ಹೂಡಿದ್ಯಾ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ದೆಹಲಿ ಶಾಸಕ ಕಪಿಲ್ ಮಿಶ್ರಾ ಅವರು, ನಮೋ ಚಾನೆಲ್‍ಗೆ ಯಾರು ಮಾಲೀಕರೇ ಇಲ್ಲ. ಭಾರತದ ಮೇಲೆ ದಾಳಿ ಮತ್ತಷ್ಟು ಮಾಡಿ ಹಾನಿಗೊಳಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ಪಾಕಿಸ್ತಾನವೇ ನಮೋ ಚಾನೆಲ್‍ಗೆ ಹಣಕಾಸು ಸಹಾಯ ನೀಡುತ್ತಿದೆ ಎಂದು ಟ್ವೀಟ್ ಮೂಲಕ ಆರೋಪಿಸಿದ್ದಾರೆ. ಇದನ್ನು ಅರವಿಂದ್ ಕೇಜ್ರಿವಾಲ್ ಅವರು ರೀ ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್ ಅವರು, ಪಾಕಿಸ್ತಾನ ಹಾಗೂ ಇಮ್ರಾನ್ ಖಾನ್ ಬಹಿರಂಗವಾಗಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಈ ಮೂಲಕ ಪಾಕ್ ಮತ್ತು ಮೋದಿ ಮಧ್ಯೆ ರಹಸ್ಯ ಒಪ್ಪಂದವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ದೂರಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಸಹಾಯ ಮಾಡಲು ಪಾಕಿಸ್ತಾನವು ಪುಲ್ವಾಮಾದಲ್ಲಿ 40 ಜನ ಭಾರತೀಯ ಯೋಧರನ್ನು ಹತ್ಯೆ ಮಾಡಿದ್ಯಾ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಗಂಭೀರವಾಗಿ ಆರೋಪಿಸಿದ್ದಾರೆ.

ಪಾಕಿಸ್ತಾನಕ್ಕೆ ಮೋದಿ ಅವರೇ ಯಾಕೆ ಗೆಲ್ಲಬೇಕು? ನಿಮ್ಮ ಹಾಗೂ ಪಾಕಿಸ್ತಾನದ ಮಧ್ಯೆ ಇರುವ ಸಂಬಂಧ ಎಷ್ಟು ಆಳವಾಗಿದೆ ಎಂಬುದನ್ನು ದೇಶ ಜನರ ಮುಂದಿಡಿ. ನರೇಂದ್ರ ಮೋದಿ ಜಯ ಸಾಧಿಸಿದರೆ ಪಾಕಿಸ್ತಾನದಲ್ಲಿ ಪಟಾಕಿಗಳು ಸಿಡಿಯುತ್ತವೆ ಎಂಬುದನ್ನು ಪ್ರತಿ ಭಾರತೀಯರು ತಿಳಿಯಬೇಕು ಎಂದು ಹೇಳಿದ್ದಾರೆ.

ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಕೂಡ ಟ್ವೀಟ್ ಮಾಡಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯಿಂದಾಗಿ ಮೋದಿ ಭಕ್ತರು ತಲೆ ಕೆರೆದುಕೊಳ್ಳುತ್ತಿದ್ದಾರೆ. ಈ ಹೇಳಿಕೆ ನೀಡಿದ ಅವರನ್ನು ಹೊಗಳಬೇಕೋ ಅಥವಾ ಬೇಡವೋ ಎನ್ನುವ ಕುರಿತು ಗೊಂದಲಕ್ಕೀಡಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸಿಂಗ್ ಸುರ್ಜೇವಾಲ ಅವರು ಕೂಡ ಟ್ವೀಟ್ ಮಾಡಿದ್ದು, ಪಾಕಿಸ್ತಾನವು ಅಧಿಕೃತವಾಗಿ ಮೋದಿ ಅವರರೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪ್ರಧಾನಿ ಮೋದಿ ಅವರಿಗೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ. ಅವರಿಗೆ ಈ ಮೊದಲು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ನೇಹಿತರಾಗಿದ್ದರು. ಈಗ ಇಮ್ರಾನ್ ಖಾನ್ ಸ್ನೇಹಿತರಾಗಿದ್ದಾರೆ. ಅವರ ಈಗ ರಹಸ್ಯ ಹೊರಬಿದ್ದಿದೆ ಎಂದು ಆರೋಪಿಸಿದ್ದಾರೆ.

ಇಮ್ರಾನ್ ಖಾನ್ ಹೇಳಿದ್ದೇನು?:
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಸಿಗುತ್ತದೆ. ಲೋಕಸಭಾ ಚುನಾವಣೆ ಬಳಿಕ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಾಕಿಸ್ತಾನದ ಜೊತೆಗಿರುವ ಕಾಶ್ಮೀರದ ಸಮಸ್ಯೆ ಬಗೆಹರಿಸಲು ಸ್ವಲ್ಪ ಭಯಪಡುವ ಸಾಧ್ಯತೆಯಿದೆ. ಒಂದು ವೇಳೆ ಬಲಪಂಥೀಯ ಪಕ್ಷವಾದ ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *