ಕನ್ನಡಿಗರನ್ನು ಕೆಣಕಿದ್ದಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್‍ಸೂದ್ ತಲೆದಂಡ!

ಬೆಂಗಳೂರು: ಕನ್ನಡಿಗರನ್ನು ಕೆಣಕಿದರೆ ಸುಮ್ಮನಿರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ ಬೆನ್ನಲ್ಲೇ, ಕಾಕತಾಳೀಯವೋ ಏನೋ ಎಂಬಂತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಲೆದಂಡವಾಗಿದೆ.

ಎಡಿಜಿಪಿ ಪ್ರವೀಣ್ ಸೂದ್ ಅವರನ್ನು ಆಧುನೀಕರಣ ಮತ್ತು ಸಂಪರ್ಕ ವಿಭಾಗಕ್ಕೆ ವರ್ಗ ಮಾಡಲಾಗಿದೆ. ತೆರವಾದ ಪೊಲೀಸ್ ಆಯುಕ್ತರ ಸ್ಥಾನಕ್ಕೆ 1989ರ ಬ್ಯಾಚ್ ಅಧಿಕಾರಿ ಹಾಗೂ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಟಿ.ಸುನೀಲ್ ಕುಮಾರ್ ಅವರನ್ನು ನಿಯೋಜನೆ ಮಾಡಲಾಗಿದೆ.

ಪ್ರವೀಣ್ ಸೂದ್ ನೇಮಕ ಮಾಡಿ ಕೇವಲ ಏಳು ತಿಂಗಳಷ್ಟೆ ಆಗಿದ್ದು, ದಿಢೀರ್ ವರ್ಗಾವಣೆ ಪೊಲೀಸ್ ಇಲಾಖೆಯಲ್ಲಿ ಆಶ್ಚರ್ಯ ಮೂಡಿಸಿದೆ. ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಕನ್ನಡಿಗರ ವಿರುದ್ಧ ದೇಶದ್ರೋಹ, ಎರಡು ಭಾಷೆಗಳ ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಜಾಮೀನು ರಹಿತ ಕೇಸು ಹಾಕಿದ್ದರು ಎನ್ನುವ ಆರೋಪ ಪ್ರವೀಣ್ ಸೂದ್ ಮೇಲೆ ಕೇಳಿ ಬಂದಿತ್ತು.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ, ವರ್ಗಾವಣೆಯಾಗಿದ್ದ ಎ.ಎಂ.ಪ್ರಸಾದ್ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ, ರಾಜ್ಯ ಗುಪ್ತದಳದ ಡಿಜಿಪಿಯಾಗಿ ನೇಮಕ ಮಾಡಲಾಗಿದೆ. ಈ ಬೆಳವಣಿಗೆಗಳ ನಡುವೆ, ಇಂದು ನಿವೃತ್ತಿಯಾದ ಸತ್ಯನಾರಾಯಣರಾವ್‍ಗೆ ಕೊನೆಯ ಅರ್ಧ ಗಂಟೆಗಾಗಿ ಸ್ಥಾನ ಕೊಟ್ಟು ನಿವೃತ್ತಿ ಮಾಡಲಾಗಿದೆ. ಅಗ್ನಿಶಾಮಕ ದಳದ ಡಿಜಿಯಾಗಿ ಸರ್ಕಾರ ಸತ್ಯನಾರಾಯಣ್ ಅವರನ್ನು ನೇಮಿಸಿತ್ತು. ಆದರೆ, ಅಧಿಕಾರ ಸ್ವೀಕರಿಸದೆಯೇ ಸತ್ಯನಾರಾಯಣರಾವ್ ನಿವೃತ್ತಿಯಾಗಿದ್ದಾರೆ. ತೆರವಾದ ಈ ಸ್ಥಾನವನ್ನು ನಾಳೆಯಿಂದ ಡಿಜಿಪಿ ನೀಲಮಣಿ ರಾಜು ತುಂಬಲಿದ್ದಾರೆ.

ಕನ್ನಡ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಕ್ಕೆ ನಿಮ್ಮನ್ನು ವರ್ಗಮಾಡಲಾಗಿದ್ಯಾ ಎನ್ನುವ ಪ್ರಶ್ನೆಗೆ ಪ್ರವೀಣ್ ಸೂದ್ ಸರ್ಕಾರವನ್ನೇ ಕೇಳಬೇಕು ಎಂದು ಉತ್ತರಿಸಿದರು.

 

Comments

Leave a Reply

Your email address will not be published. Required fields are marked *