ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆಗೆ ಕುಂದಾಪುರದಲ್ಲಿ ಸಿದ್ಧತೆ

ಉಡುಪಿ: ಖಡಕ್ ಐಪಿಎಸ್ ಅಧಿಕಾರಿ- ಕರ್ನಾಟಕದ ಸಿಂಗಂ ಖ್ಯಾತಿಯ ಮಧುಕರ್ ಶೆಟ್ಟಿ ಶುಕ್ರವಾರದಂದು ಇಹಲೋಕ ತ್ಯಜಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕರ್ನಾಟಕದ ಜನರ ಹೃದಯ ಗೆದ್ದ ದಕ್ಷ ಪೊಲೀಸ್ ಅಧಿಕಾರಿಯ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಕಣ್ಣೀರಿಡುತ್ತಾ ಸಿದ್ಧತೆ ಮಾಡುತ್ತಿದ್ದಾರೆ.

ಅಧಿಕಾರದಲ್ಲಿದ್ದುಕೊಂಡು ಉನ್ನತ ಸ್ಥಾನದಲ್ಲಿದ್ದು ಜನ ಮೆಚ್ಚುವ ಕೆಲಸ ಮಾಡೋದು ಕಷ್ಟ. ಆದ್ರೆ ರಿಯಲ್ ಹೀರೋ ಕರ್ನಾಟಕ ಸಿಂಗಂ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ತನ್ನ ಪೊಲೀಸ್ ಸೇವೆಯಲ್ಲಿ ನಿಷ್ಟುರ ಮತ್ತು ಅಷ್ಟೇ ಜನಪರ. ಮುಖ್ಯಮಂತ್ರಿಯಿಂದ ಹಿಡಿದು ಸಾಮಾನ್ಯ ಭ್ರಷ್ಟ ವ್ಯಕ್ತಿಗೂ ಕನಸಲ್ಲೂ ಕಾಡಿದ ಮಧುಕರ್ ಶೆಟ್ಟಿ ಅವರು ಎಚ್ 1 ಎನ್ 1ಗೆ ಬಲಿಯಾಗಿದ್ದಾರೆ. ಭಾನುವಾರದಂದು ಹಿರಿಯ ಪೊಲೀಸ್ ಅಧಿಕಾರಿಯ ಅಂತ್ಯ ಸಂಸ್ಕಾರ ಉಡುಪಿ ಜಿಲ್ಲೆಯ ಕುಂದಾಪುರದ ಯಡಾಡಿಯಲ್ಲಿ ನಡೆಯಲಿದೆ.

ಮಧುಕರ್ ಶೆಟ್ಟಿ ಅವರು ಹಿರಿಯ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಸುಪುತ್ರ. ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದ ಶೆಟ್ಟಿ ಕೆಲಸದ ವಿಚಾರಕ್ಕೆ ಬಂದ್ರೆ ತಂದೆಯಷ್ಟೆ ನಿಷ್ಟುರವಾದಿ. ಮಧುಕರ್ ಶೆಟ್ಟಿ ಅವರು 1999ರ ಬ್ಯಾಚ್‍ನ ಐಪಿಎಸ್ ಅಧಿಕಾರಿ. ಹುಟ್ಟಿದ್ದು ಬೆಂಗಳೂರು, ಬೆಳೆದದ್ದು ಮಂಗಳೂರು, ಪಿಜಿ(ಸ್ನಾತಕೋತ್ತರ ಪದವಿ) ಮಾಡಿದ್ದು ದೆಹಲಿಯಲ್ಲಿ. ಆದ್ರೆ ಹುಟ್ಟೂರಿನ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ ಯಡಾಡಿಯ ರೈ ಫಾರ್ಮ್‍ನಲ್ಲಿ ಈಗ ನೀರವ ಮೌನ ಬಿಟ್ಟು ಮತ್ತೆ ಕೇಳಿಸಿದ್ದು ಜೆಸಿಬಿಯ ಘರ್ಜನೆ ಮಾತ್ರ. ಮಧುಕರ್ ಶೆಟ್ಟಿಯವರ ಅಂತ್ಯಸಂಸ್ಕಾರಕ್ಕೆ ಮನೆಯ ಅಡಿಕೆ ತೋಟದಲ್ಲಿ ಸಿದ್ಧತೆ ನಡೆಯುತ್ತಿದೆ. ತಂದೆ-ತಾಯಿಗಳ ಸಮಾಧಿ ಪಕ್ಕದಲ್ಲೇ ಮಧುಕರ್ ಶೆಟ್ಟಿಯವರ ಚಿತೆಯನ್ನು ಸಿದ್ಧ ಮಾಡಲಾಗುತ್ತದೆ. ಕುಟುಂಬಸ್ಥರು- ವಡ್ಡರ್ಸೆ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸದ್ಯ ಈ ಎಲ್ಲಾ ವಿಧಿವಿಧಾನದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ

ಕುಟುಂಬಸ್ಥರಾದ ಸಂದೇಶ್ ಮತ್ತು ಮೋಹನದಾಸ್ ಮಾತನಾಡಿ, ವಡ್ಡರ್ಸೆ ಕುಟುಂಬದ ಕುಡಿಯನ್ನು ಕಳೆದುಕೊಂಡ ದುಃಖದಲ್ಲಿದ್ದೇವೆ. ಕಳೆದ ನವರಾತ್ರಿಗೆ ಬಂದಿದ್ದ ಶೆಟ್ಟರನ್ನು ಕಳೆದುಕೊಂಡಿದ್ದೇವೆ ಎಂದರೆ ನಂಬಲಾಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಸಮಾಜದಲ್ಲಿ ನೊಂದವರು, ದಲಿತರ ಬಗ್ಗೆ ಅತೀವ ಕಾಳಜಿಯಿದ್ದ ಮಧುಕರ್ ಶೆಟ್ಟಿಯವರ ಪಾರ್ಥಿವ ಶರೀರ ಮಂಗಳೂರು ಮೂಲಕ ರಾತ್ರಿ 12 ಗಂಟೆ ಸುಮಾರಿಗೆ ಹುಟ್ಟೂರು ತಲುಪುತ್ತದೆ. ಬೆಳಗ್ಗೆ 7 ಗಂಟೆಯಿಂದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ದಕ್ಷ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಲು ಡಿಜಿಪಿ ನೀಲಮಣಿ ರಾಜು, ಹಿರಿಯ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಬಳಿಕ ಭಾನುವಾರ ಬೆಳಗ್ಗೆ 10 ಗಂಟೆಗೆ ಮಧುಕರ ಶೆಟ್ಟಿ ಅವರ ಮೃತದೇಹ ಪಂಚಭೂತಗಳಲ್ಲಿ ಲೀನವಾಗಿ ಅವರ ನೆನಪು ಅಜರಾಮರವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *