ವಿಶ್ವದ ಎರಡನೇ ದುಬಾರಿ ಲೀಗ್‌ – ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ?

ನವದೆಹಲಿ: ಬಿಸಿಸಿಐ ಲೆಕ್ಕಾಚಾರ ಯಶಸ್ವಿಯಾದರೆ ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ.

ಹೌದು. 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ ಕೆಲವೇ ದಿನಗಳು ಬಾಕಿಯಿದೆ. ಸದ್ಯದ ಲೆಕ್ಕಾಚಾರ ನೋಡಿದರೆ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಪಂಡಿತರು ಅಂದಾಜಿಸಿದ್ದಾರೆ. ಒಂದು ವೇಳೆ ಭಾರೀ ಮೊತ್ತಕ್ಕೆ ಹಕ್ಕು ಮಾರಾಟವಾದರೆ ಐಪಿಎಲ್‌ ವಿಶ್ವದ ಎರಡನೇ ದುಬಾರಿ ಟೂರ್ನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

2018-2022ರ ಅವಧಿಗೆ 16,348 ಕೋಟಿ ರೂ.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈಗ ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿದೆ. ಈ ಪ್ರಕಾರ ಪ್ರತಿ ಪಂದ್ಯದ ಟಿವಿ ಹಕ್ಕು 49 ಕೋಟಿ ರೂ. ಮತ್ತು ಪ್ರತಿ ಪಂದ್ಯದ ಡಿಜಿಟಲ್‌ ಹಕ್ಕು 33 ಕೋಟಿ ರೂ. ಇದನ್ನೂ ಓದಿ: ಐಪಿಎಲ್‍ನಲ್ಲಿ ಕಳ್ಳಾಟ ನಡೆದಿದೆ, ಪಿಐಎಲ್‍ನ ಅಗತ್ಯ ಬರಬಹುದು: ಸುಬ್ರಮಣಿಯನ್ ಸ್ವಾಮಿ

ಸಾಧಾರಣವಾಗಿ ಟೀವಿ ಹಕ್ಕು ಮೂಲ ಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇದ್ದು, ಡಿಜಿಟಲ್‌ ಹಕ್ಕು ಇನ್ನೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115 ರಿಂದ 120 ಕೋಟಿ ರೂ. ಆಗುವ ಸಾಧ್ಯತೆಯಿದೆ.

ಪ್ರಸ್ತುತ ವಿಶ್ವದ ಅತಿ ದುಬಾರಿ ಕ್ರೀಡಾ ಲೀಗ್‌ ಎನ್ನುವ ಹಿರಿಮೆ ಅಮೆರಿಕದ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌)ಗೆ ಇದೆ. ಪ್ರತಿ ಎನ್‌ಎಫ್‌ಎಲ್‌ ಪಂದ್ಯದ ಮೌಲ್ಯ 134 ಕೋಟಿ ರೂ. ಇದೆ. ಎರಡನೇ ಸ್ಥಾನದಲ್ಲಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌(ಇಪಿಎಲ್‌) ಇದ್ದು, ಪ್ರತಿ ಪಂದ್ಯದ ಮೌಲ್ಯ 81 ಕೋಟಿ ರೂ. ಈಗ ಬಿಸಿಸಿಐ ನಿಗದಿಪಡಿಸಿರುವ ಮೂಲಬೆಲೆಯೇ ಇಪಿಎಲ್‌ ಮೌಲ್ಯವನ್ನು ಹಿಂದಿಕ್ಕಲಿದೆ. ಇದನ್ನೂ ಓದಿ: ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್‌ ಪ್ರತಿಕ್ರಿಯಿಸಿ, ಐಪಿಎಲ್ ಮಾಧ್ಯಮ ಹಕ್ಕುಗಳು ಕ್ರೀಡಾ ಉದ್ಯಮಕ್ಕೆ ಹೊಸ ಬೆಂಚ್-ಮಾರ್ಕ್‌ ಆಗಲಿದೆ. ಯಾವುದೇ ಸಂಖ್ಯೆಯನ್ನು ಊಹಿಸಲು ಬಯಸುವುದಿಲ್ಲ. ಆದರೆ ಇದು ದಾಖಲೆ ಮುರಿಯುವ ಸಂಖ್ಯೆಯಾಗಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಈ ಬಾರಿ ದುಬೈಯಲ್ಲಿ ನಡೆದ ಬಿಡ್ಡಿಂಗ್‌ನಲ್ಲಿ ಸಿವಿಸಿ ಕ್ಯಾಪಿಟಲ್‌ 5,600 ಕೋಟಿ ರೂ. ನೀಡಿ ಅಹಮದಾಬಾದ್‌ ತಂಡವನ್ನು ಖರೀದಿಸಿದರೆ ಆರ್‌ಪಿಎಸ್‌ಜಿ ಗ್ರೂಪ್‌ 7,090 ಕೋಟಿ ರೂ. ಬಿಡ್‌ ಮಾಡಿ ಲಕ್ನೋ ತಂಡವನ್ನು ಖರೀದಿಸಿದೆ. ಬಿಸಿಸಿಐ ಎರಡು ಫ್ರಾಂಚೈಸಿಗಳ ಮಾರಾಟದಿಂದ ಒಟ್ಟು 10 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿತ್ತು. ಆದರೆ ಬಿಸಿಸಿಐ ನಿರೀಕ್ಷೆಗೂ ಮೀರಿ 2,690 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಗಳಿಸಿದೆ.

Comments

Leave a Reply

Your email address will not be published. Required fields are marked *