ಲಾಯಲ್‌ ಫ್ಯಾನ್ಸ್‌ಗಾಗಿ ರಾಯಲ್‌ ಗೆಲುವು – ಎಲ್ಲೆಡೆ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿ ಮೆರೆದಾಡಿದ ಫ್ಯಾನ್ಸ್‌

ಬೆಂಗಳೂರು: ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ.. ಆರ್‌ಸಿಬಿ ಐಪಿಎಲ್‌ 2025 ಗೆಲುವಿನ ಸಂಭ್ರಮ ಮನೆ ಮಾಡಿದೆ. ಲಾಯಲ್‌ ಫ್ಯಾನ್ಸ್‌ಗಾಗಿ ರಾಯಲ್‌ ಗೆಲುವಿನಂತಿತ್ತು ಮಂಗಳವಾರದ ಪಂದ್ಯ.

18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್‌ ಟ್ರೋಫಿ ಎತ್ತಿ ಹಿಡಿದಿದೆ. ಆ ಕ್ಷಣಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳ ಆಸೆ ಕೊನೆಗೂ ಈಡೇರಿದೆ. ರಜತ್‌ ಪಾಟೀದಾರ್‌ ಪಡೆ ಟ್ರೋಫಿ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮಿಗಿಲು ಮುಟ್ಟಿತು. ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿತ್ತು. ಪಟಾಕಿ ಸದ್ದುಗಳು ಮೊಳಗಿದವು. ಆರ್‌ಸಿಬಿ.. ಆರ್‌ಸಿಬಿ ಎಂಬ ಜಯಘೋಷ ಕಿವಿ ಗಡಚಿಕ್ಕವಂತಿತ್ತು. ಈ ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ. ಇದನ್ನೂ ಓದಿ: ಈ ಸಲ ಕಪ್ ನಮ್ದು – ಆರ್‌ಸಿಬಿ ದಿಗ್ವಿಜಯಕ್ಕೆ ಸಿದ್ದರಾಮಯ್ಯ, ಡಿಕೆಶಿ, ಹೆಚ್‌ಡಿಕೆ ಅಭಿನಂದನೆ

ಬೆಂಗಳೂರಿನ ಓರಾಯನ್‌ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್‌ನಲ್ಲಿ ಆರ್‌ಸಿಬಿ ವರ್ಸಸ್‌ ಪಂಜಾಬ್‌ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮ್ಯಾಚ್‌ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಚರ್ಚ್‌ ಸ್ಟ್ರೀಟ್‌ನಲ್ಲಿ ಜನಸಾಗರವೇ ನೆರೆದಿತ್ತು. ಲೈವ್‌ ಸ್ಕ್ರೀನ್‌ನಲ್ಲಿ ಫ್ಯಾನ್ಸ್‌ ಸಂಭ್ರಮಾಚರಣೆ ಮಾಡಿದರು. ಕೊಹ್ಲಿ ಅಳುವುದನ್ನು ಕಂಡು ಯುವತಿಯೊಬ್ಬಳು ಕಣ್ಣೀರಿಟ್ಟಳು. ನವರಂಗ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಗೋವಿಂದರಾಜನಗರ ಗ್ರೌಂಡ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಭಿಮಾನಿಗಳಲ್ಲಿ ಜೋಶ್‌ ಇತ್ತು. ಮೈಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ ರಸ್ತೆಯಲ್ಲಿ ಫುಲ್‌ ಟ್ರಾಫಿಕ್‌ ಜಾಮ್‌ ಆಯಿತು. ಆನೇಕಲ್ ಪಟ್ಟಣದ ತಿಲಕ್‌ ವೃತ್ತದಲ್ಲಿ ಆರ್‌ಸಿಬಿ ಗೆಳೆಯರ ಬಳಗ ಸಂಭ್ರಮಾಚರಣೆ ಮಾಡಿತು. ಆರ್‌ಸಿಬಿ ಪ್ರೇಮಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾಜ್‌ಕುಮಾರ್‌ ರಸ್ತೆ, ಮಾರತ್ತಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ, ವಿಜಯನಗರ, ಎಂಜಿ ರಸ್ತೆ ಮೊದಲಾದ ಕಡೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸಿದರು. ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಿಗಟ್ಟಿ ಸಂಭ್ರಮಿಸಿದರು.

ಆರ್‌ಸಿಬಿ ಗೆಲ್ಲುತ್ತಿದ್ದಂತೆ ಕೊಪ್ಪಳದ ಹಲವೆಡೆ ಸಂಭ್ರಮ ಮನೆ ಮಾಡಿತ್ತು. ಸಂಸದ ರಾಜಶೇಖರ, ಶಾಸಕ ರಾಘವೇಂದ್ರ ಹಿಟ್ನಾಳ್‌ ಅವರು ಸಂಭ್ರಮದಲ್ಲಿ ಭಾಗಿಯಾದರು.

ಮಂಡ್ಯದ ಗೌರಿಶಂಕರ್‌ ನಗರದಲ್ಲಿ ಎಲ್‌ಇಡಿ ಪರದೆಯಲ್ಲಿ ಮ್ಯಾಚ್‌ ಲೈವ್‌ ನೋಡಿ ಅಭಿಮಾನಿಗಳು ಖುಷಿಪಟ್ಟರು. ಚಿಕ್ಕಬಳ್ಳಾಪುರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಅಭಿಮಾನಿಗಳ ಸಾಗರವೇ ನೆರೆದಿತ್ತು. ದಾವಣಗೆರೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬೆಳಗಾವಿ ಚಮ್ಮಮ್ಮ ಸರ್ಕಲ್‌ನಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಆರ್‌ಸಿಬಿ ಪರ ಜಯಘೋಷ ಮೊಳಗಿತು. ಕೋಲಾರದಲ್ಲೂ ಸಂಭ್ರಮ ಮನೆ ಮಾಡಿತ್ತು. ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಜೈಕಾರ ಕೂಗಿದರು. ಧಾರವಾಡ ಕೆಸಿಡಿಯಿಂದ ಸಪ್ತಾಪೂರ ವರೆಗೂ ಸಂಭ್ರಮದ ವಾತಾವರಣ ನೆರೆದಿತ್ತು. ಆರ್‌ಸಿಬಿ ವಿಜಯಿಯಾದ ಹಿನ್ನೆಲೆಯಲ್ಲಿ ಗದಗದಲ್ಲೂ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: RCB Champions | ಈ ಖುಷಿ ನಮ್ಮಿಂದ ತಡೆಯೋಕೆ ಆಗ್ತಿಲ್ಲ – ಅಭಿಮಾನಿ ದೇವ್ರುಗಳಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಬಳ್ಳಾರಿಯ ರಾಯಲ್‌ ವೃತ್ತ, ಹಾಸನ ನಗರದ ಎಂಜಿ ರಸ್ತೆ, ಚಾಮರಾಜನಗರ, ಚಿಕ್ಕಬಳ್ಳಾಪುರದ ಆಜಾದ್‌ ಪಾರ್ಕ್‌ ಹಾಗೂ ಬಲಮುರಿ ವೃತ್ತ, ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ, ಹಾವೇರಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣ, ಬೀದರ್‌ ನಗರದ ಅಂಬೇಡ್ಕರ್ ವೃತ, ದಾವಣಗೆರೆಯ ಜಯದೇವ ವೃತ್ತ ಹಾಗೂ ಜಿಲ್ಲೆಯ ಹೊನ್ನಾಳಿ ಖಾಸಗಿ ಬಸ್‌ ನಿಲ್ದಾಣ, ಕಲಬುರಗಿಯ ಎಸ್‌ವಿಪಿ ವೃತ್ತ ಮೊದಲಾದ ಕಡೆ ಅಪಾರ ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ನೆರೆದು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಗೆಲುವನ್ನು ಸಂಭ್ರಮಿಸಿದರು.