ಭಾರೀ ಮಳೆಯಿಂದ ಪಂದ್ಯ ರದ್ದು – ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆರ್‌ಸಿಬಿ!

ಬೆಂಗಳೂರು: ಭಾರೀ ಮಳೆಯಿಂದಾಗಿ ಶನಿವಾರ (ಮೇ 17) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinaswamy Stadium) ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಆರ್‌ಸಿಬಿ (RCB) ನಡುವಿನ ಐಪಿಎಲ್ (IPL 2025) ಪಂದ್ಯ ರದ್ದಾಗಿತ್ತು. ಈ ಪಂದ್ಯದ ಎಲ್ಲಾ ಮಾನ್ಯ ಟಿಕೆಟ್ (RCB Refund Tickets) ಹೊಂದಿರುವವರಿಗೆ ಹಣ ಮರುಪಾವತಿ ಮಾಡುವುದಾಗಿ ಫ್ರಾಂಚೈಸಿ ಘೋಷಿಸಿದೆ.

ಈ ಬಗ್ಗೆ ಆರ್‌ಸಿಬಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಡಿಜಿಟಲ್ ಟಿಕೆಟ್ ಹೊಂದಿರುವವರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಬಳಸುವ ಅವರ ಖಾತೆಗೆ ಮುಂದಿನ ಕೆಲಸದ 10 ದಿನಗಳಲ್ಲಿ ಮರುಪಾವತಿ ಮಾಡಲಾಗುತ್ತದೆ. ಮೇ 31ರ ಒಳಗೆ ಹಣ ಮರುಪಾವತಿಯಾಗದಿದ್ದರೆ ಬುಕಿಂಗ್ ವಿವರಗಳೊಂದಿಗೆ refund@ticketgenie.in ಗೆ ಇಮೇಲ್ ಕಳುಹಿಸುವಂತೆ ಸೂಚಿಸಲಾಗಿದೆ. ಟಿಕೆಟ್ ಹೊಂದಿರುವವರು ಮರುಪಾವತಿಗೆ ತಮ್ಮ ಮೂಲ ಟಿಕೆಟ್‌ನ್ನು ಖರೀದಿಸಿದ ಸ್ಥಳದಲ್ಲಿ ಒಪ್ಪಿಸಬೇಕಾಗುತ್ತದೆ. ಕಾಂಪ್ಲಿಮೆಂಟರಿ ಟಿಕೆಟ್‌ಗಳಿಗೆ ಈ ಮರುಪಾವತಿ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಒಂದು ವಾರಗಳ ಕಾಲ ಐಪಿಎಲ್ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಕದನ ವಿರಾಮದ ಬಳಿಕ ಪಂದ್ಯವನ್ನು ಪುನರಾರಂಭಗೊಳಿಸಲಾಗಿತ್ತು. ವಿರಾಟ್‌ ಕೊಹ್ಲಿಯೇ ಪ್ರಮುಖ ಆಕರ್ಷಣೆಯಾಗಿದ್ದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಹಾಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಲಭ್ಯವಾಯಿತು. ಆರ್‌ಸಿಬಿ ಪ್ಲೇ ಆಫ್‌ಗೆ ಹತ್ತಿರವಾದ್ರೆ, ಕೋಲ್ಕತ್ತಾ ನೈಟ್‌ರೈಡರ್ಸ್‌ ರೇಸ್‌ನಿಂದ ಹೊರಬಿದ್ದಿತು.

ಆದ್ರೆ ಕಿಂಗ್‌ ಕೊಹ್ಲಿ ಅವರಿಗೆ ವಿಶೇಷ ಗೌರವ ಸಲ್ಲಿಸಲು ಬಂದಿದ್ದ ಸಾವಿರಾರು ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿತ್ತು. ಪಂದ್ಯ ನಡೆಯದೇ ಅಭಿಮಾನಿಗಳು ನಿರಾಸೆಯಿಂದ ಹೊರಟಿದ್ದರು. ತಮ್ಮ ಅಭಿಮಾನಿಗಳಿಗೆ ಆಗುವ ಹೊರೆಯನ್ನು ತಪ್ಪಿಸಲು ಆರ್‌ಸಿಬಿ ಪಂದ್ಯದ ಟಿಕೆಟ್‌ ಶುಲ್ಕವನ್ನು ಮರುಪಾವತಿ ಮಾಡುವುದಾಗಿ ಹೇಳಿದೆ.

ಸದ್ಯ ಆರ್‌ಸಿಬಿಗೆ ಲೀಗ್‌ ಸುತ್ತಿನಲ್ಲಿ ಇನ್ನೆರಡು ಪಂದ್ಯಗಳು ಮಾತ್ರ ಬಾಕಿ ಉಳಿದ್ದು, ತವರಿನಲ್ಲಿ ಒಂದು ಪಂದ್ಯ ಬಾಕಿ ಇದೆ. ಮೇ 23ರಂದು ಹೈದರಾಬಾದ್‌ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ, ಮೇ 27ರಂದು ಲಕ್ನೂ ಸೂಪರ್‌ ಜೈಂಟ್ಸ್‌ ವಿರುದ್ಧ ಏಕನಾ ಕ್ರೀಡಾಂಗಣದಲ್ಲಿ ಲೀಗ್‌ ಸುತ್ತಿನ ಕೊನೆಯ ಪಂದ್ಯವನ್ನಾಡಲಿದೆ.