ಮತ್ತೆ ಕೈಕೊಟ್ಟ ಪಂತ್‌ – ತವರಿನಲ್ಲಿ ಗೆದ್ದ ಪಂಜಾಬ್‌; ಪ್ಲೇ ಆಫ್‌ ಹಾದಿ ಬಹುತೇಕ ಖಚಿತ

ಧರ್ಮಶಾಲಾ: ಸಂಘಟಿತ ಬೌಲಿಂಗ್‌, ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 37 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಈ ಮೂಲಕ 11 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ 15 ಅಂಕ ಪಡೆದಿರುವ ಪಂಜಾಬ್‌ ಪ್ಲೇ ಆಫ್‌ ಹಾದಿಯನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇತ್ತ 11 ಪಂದ್ಯಗಳಲ್ಲಿ ಕೇವಲ 5ರಲ್ಲಿ ಮಾತ್ರ ಗೆಲುವು ಸಾಧಿಸಿರುವ ಲಕ್ನೋ ಸೂಪರ್‌ ಜೈಂಟ್ಸ್‌ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲೇ ಉಳಿದಿದೆ. ಅಲ್ಲದೇ ಪ್ಲೇ ಆಫ್‌ ಹಾದಿ ಬಹುತೇಕ ಮುಚ್ಚಿದಂತಾಗಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 236 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಲಕ್ನೋ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ ನಿಗದಿ ಓವರ್‌ಗಳಲ್ಲಿ 7‌ ವಿಕೆಟ್‌ ನಷ್ಟಕ್ಕೆ 199 ರನ್‌ಗಳಿಸಿ ಸೋಲೊಪ್ಪಿಕೊಂಡಿತು.

ಪಂಜಾಬ್ ಕಿಂಗ್ಸ್ ನೀಡಿದ 237 ರನ್ ಗಳ ಗುರಿ ಬೆನ್ನಟ್ಟಿದ ಲಕ್ನೋಗೆ ಆರಂಭಿಕ ಆಘಾತ ಎದುರಾಯಿತು. ಮಾರ್ಕ್ರಮ್ 13 ರನ್ ಗಳಿಸಿ ಔಟಾದರೆ ಮಿಚೆಲ್ ಮಾರ್ಷ್‌ ಶೂನ್ಯಕ್ಕೆ ಔಟಾದರು. ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ನಿಕೋಲಸ್‌ ಪೂರನ್ ಸಹ 6 ರನ್ ಗಳಿಗೆ ಔಟಾಗಿದ್ದು ಲಕ್ನೋ ತೀವ್ರ ಹಿನ್ನಡೆಯಾಗುವಂತೆ ಮಾಡಿತು. ಆದರೆ ಆಯೂಷ್ ಬದೋನಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 74 ರನ್ ಗಳಿಸಿದ್ದು ತಂಡದ ಗೆಲುವಿಗೆ ಸಾಕಷ್ಟು ಪ್ರಯತ್ನಿಸಿದರು. ಆದರೆ ಲಕ್ನೋ ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಂಜಾಬ್‌ಗೆ ಆರಂಭದಲ್ಲೇ ಪ್ರಿಯಾಂಶ್ ಆರ್ಯ (1) ವಿಕೆಟ್ ನಷ್ಟವಾಯಿತು. ಆದರೆ ಜೋಶ್ ಇಂಗ್ಲಿಷ್ (30) ಜೊತೆ ಸೇರಿದ ಪ್ರಭಸಿಮ್ರನ್ ತಂಡವನ್ನು ಮುನ್ನಡೆಸಿದರು. ವಿಕೆಟ್‌ನ ಒಂದು ತುದಿಯಿಂದ ನೆಲಕಚ್ಚಿ ಆಟವಾಡಿದ ಪ್ರಭಸಿಮ್ರನ್‌ಗೆ ನಾಯಕ ಶ್ರೇಯಸ್ ಅಯ್ಯರ್ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಶ್ರೇಯಸ್ ಕೇವಲ 25 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದರು. ಅತ್ತ ಪ್ರಭಸಿಮ್ರನ್ ಎಸೆತಗಳಲ್ಲಿ ಅರ್ಧಶತಕ ಪೊರ್ಣಗೊಳಿಸಿದರು. ಇನಿಂಗ್ಸ್‌ನ ಕೊನೆಯಲ್ಲಿ ರನ್ ಗತಿ ಏರಿಸುವ ಭರದಲ್ಲಿ ಪ್ರಭಸಿಮ್ರನ್ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಶತಕ ಗಳಿಸುವ ಅವಕಾಶ ತಪ್ಪಿತು. 48 ಎಸೆತಗಳನ್ನು ಎದುರಿಸಿದ ಪ್ರಭಸಿಮ್ರನ್ 7 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 91 ರನ್ ಗಳಿಸಿದರು.

ಇನ್ನುಳಿದಂತೆ ಶಶಾಂಕ್ ಸಿಂಗ್ 15 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿ (4 ಬೌಂಡರಿ, 1 ಸಿಕ್ಸರ್) ಅಬ್ಬರಿಸಿದರು. ಮಾರ್ಕಸ್ ಸ್ಟೋಯಿನಸ್ ಸಹ ಅಜೇಯ 15 ರನ್‌ ಗಳ ಕಾಣಿಕೆ (1 ಸಿಕ್ಸರ್, 1 ಬೌಂಡರಿ) ನೀಡಿದರು.

ಲಖನೌ ಪರ ಆಕಾಶ್ ಮಹಾರಾಜ್ ಸಿಂಗ್ ಹಾಗೂ ದಿಗೇಶ್ ರಾಠಿ ತಲಾ ಎರಡು ವಿಕೆಟ್ ಗಳಿಸಿದರು.