IPL 2024: ಮಳೆಗೆ ಪಂದ್ಯ ಬಲಿ – ಸನ್‌ ರೈಸರ್ಸ್‌ ಪ್ಲೇ ಆಫ್‌ಗೆ, ಟೈಟಾನ್ಸ್‌ ಮನೆಗೆ

– ಶನಿವಾರ ಸಿಎಸ್‌ಕೆ-ಆರ್‌ಸಿಬಿ ನಡುವೆ ನಿರ್ಣಾಯಕ ಕದನ

ಹೈದರಾಬಾದ್‌: ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಗುಜರಾತ್‌ ಟೈಟಾನ್ಸ್‌ ಮತ್ತು ಸನ್‌ ರೈಸರ್ಸ್‌ ಹೈದರಾಬಾದ್‌ (GT vs SRH) ನಡುವಿನ ಪಂದ್ಯವು ಮಳೆಯಿಂದ ರದ್ದಾಗಿದೆ. ಪಂದ್ಯ ರದ್ದಾದ ಹಿನ್ನೆಲೆ ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆದುಕೊಂಡಿವೆ. ಇದರೊಂದಿಗೆ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡವು ಪ್ಲೇ ಆಫ್‌ಗೆ ಅಧಿಕೃತವಾಗಿ ಪ್ರವೇಶ ಗಿಟ್ಟಿಸಿಕೊಂಡಿದೆ.

ಈಗಾಗಲೇ ಕೋಲ್ಕತ್ತಾ ನೈಟ್‌ರೈಡರ್ಸ್‌, ರಾಜಸ್ಥಾನ್‌ ರಾಯಲ್ಸ್‌ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದ್ದು, ಸನ್‌ ರೈಸರ್ಸ್‌ ಹೈದರಾಬಾದ್‌ 2024ರ ಆವೃತ್ತಿಯಲ್ಲಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ 3ನೇ ತಂಡವಾಗಿದೆ. ಇನ್ನೊಂದು ತಂಡಕ್ಕೆ ಪ್ಲೇ ಆಫ್‌ ಪ್ರವೇಶಿಸುವ ಅವಕಾಶವಿದೆ. ಶನಿವಾರ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿ (CSK vs RCB) ಉತ್ತಮ ರನ್‌ರೇಟ್‌ನೊಂದಿಗೆ ಗೆದ್ದರೆ ಪ್ಲೇ ಆಫ್‌ಗೆ (IPL Playoffs) ಎಂಟ್ರಿ ಕೊಡಲಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಚೆನ್ನೈ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.

ಗಂಟು-ಮೂಟೆ ಕಟ್ಟಿದ ಟೈಟಾನ್ಸ್:‌
2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಗುಜರಾತ್‌ ಟೈಟಾನ್ಸ್‌ ತನ್ನ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಮುಡಿಗೇರಿಸಿಕೊಂಡಿತ್ತು. 2ನೇ ಆವೃತ್ತಿಯಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಆದ್ರೆ 2024ರ ಆವೃತ್ತಿಯಲ್ಲಿ 12ರಲ್ಲಿ 5 ಪಂದ್ಯಗೆದ್ದು ಪ್ಲೇ ಆಫ್‌ ಕನಸು ಕಂಡಿದ್ದ ಗುಜರಾತ್‌ ತಂಡಕ್ಕೆ ಮಳೆ ತಣ್ಣೀರು ಎರಚಿತು. ತನ್ನ ಪಾಲಿನ ಕೊನೆಯ ಎರಡೂ ಪಂದ್ಯಗಳೂ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಒಂದೊಂದು ಅಂಕ ಪಡೆದುಕೊಂಡು ಲೀಗ್‌ ಸುತ್ತಿನಲ್ಲೇ ತನ್ನ ಆಟ ಮುಗಿಸಿತು.

ಸನ್‌ಗೆ ಮಳೆ ತಂದ ವರ:
12 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ 13ನೇ ಪಂದ್ಯ ರದ್ದಾದರೂ ಒಂದು ಅಂಕ ಪಡೆದು ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಒಟ್ಟು 13 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿರುವ ಹೈದರಾಬಾದ್‌ 15 ಅಂಕಗಳೊಂದಿಗೆ ಪ್ಲೇ ಆಫ್‌ ಪ್ರವೇಶಿಸಿದೆ.