IPL 2024: ಮಿಂಚಿದ ಸಂಜು, ಧ್ರುವ್‌ – 7 ವಿಕೆಟ್‌ಗಳ ಅಮೋಘ ಜಯ – ಪ್ಲೇ ಆಫ್‌ಗೆ ರಾಜಸ್ಥಾನ್‌

ಲಕ್ನೋ: ಸಂಜು ಸ್ಯಾಮ್ಸನ್‌, ಧ್ರುವ್‌ ಜುರೆಲ್‌ (Dhruv Jurel, Sanju Samson) ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ಧ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.

ಇಲ್ಲಿನ ಏಕನಾ ಕ್ರೀಡಾಂಗಣಡಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಲಕ್ನೋ 5 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿತ್ತು. 197 ರನ್‌ಗಳ ಬೃಹತ್‌ ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಆರ್‌ 19 ಓವರ್‌ಗಳಲ್ಲೇ 199 ರನ್‌ ಬಾರಿಸಿ ಗೆಲುವು ಸಾಧಿಸಿದೆ. ಅಲ್ಲದೇ 9 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿರುವ ರಾಜಸ್ಥಾನ್‌ ರಾಯಲ್ಸ್‌ ತಂಡವು 16 ಅಂಕ ಪಡೆಯುವ ಜೊತೆಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.

ಚೇಸಿಂಗ್‌ ಆರಂಭಿಸಿದ್ದ ರಾಜಸ್ಥಾನ್‌ ರಾಯಲ್ಸ್‌ (RR) 8.4 ಓವರ್‌ಗಳಲ್ಲಿ 78 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಇದರಿಂದ ರಾಜಸ್ಥಾ ನ್‌ ಸೋಲುತ್ತದೆ ಎಂದು ಭಾವಿಸಲಾಗಿತ್ತು. ನಂತರ ಜೊತೆಗೂಡಿದ ಧ್ರುವ್‌ ಜುರೆಲ್‌ ಮತ್ತು ಸಂಜು ಸ್ಯಾಮ್ಸನ್‌ ಜೋಡಿ ಮುರಿಯದ 4ನೇ ವಿಕೆಟ್‌ಗೆ 62 ಎಸೆತಗಳಲ್ಲಿ 121 ರನ್‌ಗಳ ಜೊತೆಯಾಟ ನೀಡಿತು. ಇದರಿಂದ ರಾಜಸ್ಥಾನ್‌ಗೆ ಗೆಲುವು ಸುಲಭವಾಯಿತು.

ಸಂಜು 33 ಎಸೆತಗಳಲ್ಲಿ 71 ರನ್‌ ಚಚ್ಚಿದರೆ (4 ಸಿಕ್ಸರ್‌, 7 ಬೌಂಡರಿ), ಧ್ರುವ್‌ ಜುರೆಲ್‌ 52 ರನ್‌ (2 ಸಿಕ್ಸರ್‌, 5 ಬೌಂಡರಿ), ಯಶಸ್ವಿ ಜೈಸ್ವಾಲ್‌ 24 ರನ್‌, ಜೋಸ್‌ ಬಟ್ಲರ್‌ 34 ರನ್‌ ಹಾಗೂ ರಿಯಾನ್‌ ಪರಾಗ್‌ 14 ರನ್‌ಗಳ ಕೊಡುಗೆ ನೀಡಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ಬೃಹತ್‌ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಕೆ.ಎಲ್‌ ರಾಹುಲ್‌ ಮತ್ತು ದೀಪಕ್‌ ಹೂಡ ಅವರ ಜವಾಬ್ದಾರಿಯುತ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ತಂಡ ಬೌಲಿಂಗ್‌ ಪಿಚ್‌ನಲ್ಲೂ 190 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಲಕ್ನೋ ಪರ ಕೆ.ಎಲ್‌ ರಾಹುಲ್‌ 76 ರನ್‌ (48 ಎಸೆತ, 2 ಸಿಕ್ಸರ್‌, 8 ಬೌಂಡರಿ), ದೀಪಕ್‌ ಹೂಡ 31 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದ್ರೆ, ನಿಕೋಲಸ್‌ ಪೂರನ್‌ 11 ರನ್‌, ಆಯುಷ್‌ ಬದೋನಿ 18 ರನ್‌, ಕೃನಾಲ್‌ ಪಾಂಡ್ಯ 15 ರನ್‌ ಕ್ವಿಂಟನ್‌ ಡಿಕಾಕ್‌ 8 ರನ್‌ ಗಳಿಸಿದ್ರೆ, ಮಾರ್ಕಸ್‌ ಸ್ಟೋಯ್ನಿಸ್‌ ಸೊನ್ನೆ ಸುತ್ತಿದರು.

ರಾಜಸ್ಥಾನ್‌ ಪರ ಸಂದೀಪ್‌ ಶರ್ಮಾ 2 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌, ಅವೇಶ್‌ ಖಾನ್‌, ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದರು.