ಕೊಹ್ಲಿ, ಕಾರ್ತಿಕ್‌, ಮಹಿಪಾಲ್‌ ಸ್ಫೋಟಕ ಆಟ – ಆರ್‌ಸಿಬಿಗೆ 4 ವಿಕೆಟ್‌ಗಳ ರೋಚಕ ಜಯ

ಬೆಂಗಳೂರು: ವಿರಾಟ್‌ ಕೊಹ್ಲಿ (Virat kohli) ಸ್ಫೋಟಕ ಅರ್ಧಶತಕ ಮತ್ತು ಕೊನೆಯಲ್ಲಿ ಕಾರ್ತಿಕ್‌ (Dinesh Karthik), ಮಹಿಪಾಲ್‌ (Mahipal Lomror) ಅವರ ಸಿಕ್ಸರ್‌ ಬೌಂಡರಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಗೆಲ್ಲಲು 177 ರನ್‌ಗಳ ಕಠಿಣ ಗುರಿಯನ್ನು ಪಡೆದ ಆರ್‌ಸಿಬಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 178 ರನ್‌ ಹೊಡೆದು ಮೊದಲ ಜಯ ದಾಖಲಿಸಿತು.

ಕೊನೆಯ 30 ಎಸೆತಗಳಲ್ಲಿ 59 ರನ್‌ ಬೇಕಿತ್ತು. 16ನೇ ಓವರ್‌ನಲ್ಲಿ 12 ರನ್‌ ಬಂದರೂ ಕೊಹ್ಲಿ 77 ರನ್‌(49 ಎಸೆತ, 11 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದ ಕಾರಣ ಪಂದ್ಯ ರೋಚಕ ತಿರುವು ಪಡೆದುಕೊಂಡಿತ್ತು. 16.2 ನೇ ಓವರ್‌ನಲ್ಲಿ ಅನುಜ್‌ ರಾವತ್‌ ಎಲ್‌ಬಿ ಔಟಾಗಿದ್ದರಿಂದ ಪಂದ್ಯ ಪಂಜಾಬ್‌ ಕಡೆಗೆ ವಾಲಿತ್ತು. ಇದನ್ನೂ ಓದಿ: ಭಾರತದಲ್ಲೇ ಐಪಿಎಲ್‌ – ಪೂರ್ಣ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಮ್ಯಾಚ್‌?

ಈ ವೇಳೆ ಜೊತೆಯಾದ ಕಾರ್ತಿಕ್‌ ಮತ್ತು ಇಂಪ್ಯಾಕ್ಟ್‌ ಪ್ಲೇಯರ್‌ ಮಹಿಪಾಲ್‌ ಮುರಿಯದ 7ನೇ ವಿಕೆಟಿಗೆ ಕೇವಲ 18 ಎಸೆತಗಳಲ್ಲಿ 48 ರನ್‌ ಜೊತೆಯಾಟವಾಡಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟರು.  ವಿಕೆಟ್‌ ಪತನವಾಗುತ್ತಿದ್ದರೂ ಕ್ರೀಸ್‌ನಲ್ಲಿ ನಿಂತು ಸ್ಫೋಟಕ ಅರ್ಧಶತಕ ಸಿಡಿಸಿದ ಕೊಹ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾರದರು.

17ನೇ ಓವರ್‌ನಲ್ಲಿ 11 ರನ್‌ ಬಂದರೆ 18ನೇ ಓವರ್‌ನಲ್ಲಿ 13 ರನ್‌ ಬಂತು. 19ನೇ ಓವರ್‌ನಲ್ಲಿ ಕಾರ್ತಿಕ್‌ ಬೌಂಡರಿ, ಸಿಕ್ಸ್‌ ಸಿಡಿಸಿದ ಪರಿಣಾಮ 13 ರನ್‌ ಬಂತು. ಕೊನೆಯ 6 ಎಸೆತದಲ್ಲಿ 10 ರನ್‌ ಬೇಕಿತ್ತು. ಅರ್ಶ್‌ದೀಪ್‌ ಸಿಂಗ್‌ ಎಸೆದ ಮೊದಲ ಎಸೆತವನ್ನು ಕಾರ್ತಿಕ್‌ ಸಿಕ್ಸರ್‌ಗೆ ಅಟ್ಟಿದರು. ಎರಡನೇ ಎಸೆತದಲ್ಲಿ ಬೌಂಡರಿಗೆ ಸಿಡಿಸಿ ತವರು ನೆಲದಲ್ಲಿ ಆರ್‌ಸಿಬಿಗೆ ಜಯ ತಂದುಕೊಟ್ಟರು.

ಕಾರ್ತಿಕ್‌ ಔಟಾಗದೇ 28 ರನ್‌(10 ಎಸೆತ, 3 ಬೌಂಡರಿ, 2 ಸಿಕ್ಸರ್‌), ಮಹಿಪಾಲ್‌ ಔಟಾಗದೇ 17 ರನ್‌ (8 ಎಸೆತ, 2 ಬೌಂಡರಿ, 1 ಸಿಕ್ಸರ್‌) ರನ್‌ ಹೊಡೆದರು.

ಆರ್‌ಸಿಬಿ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತು. ನಾಯಕ ಡುಪ್ಲೆಸಿಸ್‌ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬೆನ್ನಲ್ಲೇ ಕ್ಯಾಮರೂನ್‌ ಗ್ರೀನ್‌ 3 ರನ್‌ ಗಳಿಸಿ ಔಟಾದರು. ನಂತರ ಬಂದ ರಜತ್‌ ಪಾಟಿದರ್‌ 18 ರನ್‌ ( 18 ಎಸೆತ, 1 ಬೌಂಡರಿ) ಹೊಡೆದು ಬೌಲ್ಡ್‌ ಆದರು. ಬೆನ್ನಲ್ಲೇ ಮ್ಯಕ್ಸ್‌ವೆಲ್‌ 3 ರನ್‌ ಗಳಿಸಿ ಹರ್‌ಪ್ರೀತ್‌ ಬ್ರಾರ್‌ಗೆ ಬೌಲ್ಡ್‌ ಆದರು.

ಟಾಸ್‌ ಸೋತು ಮೊದಲ ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ಗೆ ನಾಯಕ ಶಿಖರ್‌ ಧವನ್‌ ಬಲ ತುಂಬಿ 45 ರನ್‌ (37 ಎಸೆತ, 4 ಬೌಂಡರಿ) ಹೊಡೆದು ಔಟಾದರು. ನಂತರ ಪ್ರಭಾಸಿಮ್ರಾನ್ ಸಿಂಗ್ 25 ರನ್‌, ಲಿವಿಂಗ್‌ ಸ್ಟೋನ್‌ 17 ರನ್‌, ಸ್ಯಾಮ್‌ ಕರ್ರನ್‌ 23 ರನ್‌ ರನ್‌ ಹೊಡೆದರು. ಕೊನೆಯಲ್ಲಿ ಶಶಾಂಕ್‌ ಸಿಂಗ್‌ 21 ರನ್‌ ( 8 ಎಸೆತ, 1 ಬೌಂಡರಿ, 2 ಸಿಕ್ಸರ್‌) ಜಿತೇಶ್‌ ಶರ್ಮಾ 27 ರನ್‌ (20 ಎಸೆತ, 1 ಬೌಂಡರಿ, 2 ಸಿಕ್ಸರ್‌) ಹೊಡೆದರು. ಅಂತಿಮವಾಗಿ ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿತು.

ಸಿರಾಜ್‌ 2 ಮತ್ತು ಮ್ಯಾಕ್ಸ್‌ವೆಲ್‌ ತಲಾ ಎರಡು ವಿಕೆಟ್‌ ಪಡೆದರೆ ಯಶ್‌ ದಯಾಳ್‌, ಅಲ್ಜಾರಿ ಜೋಸೆಫ್‌ ತಲಾ ಒಂದೊಂದು ವಿಕೆಟ್‌ ಪಡೆದರು.