ಹೈವೋಲ್ಟೇಜ್ ಕದನ ವಾಷ್‌ಔಟ್‌ ಆಗುವ ಸಾಧ್ಯತೆ – ಆರ್‌ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ!

– ಬೆಂಗಳೂರಿನಲ್ಲಿ ಮಳೆಯ ವಾತಾವರಣ ಹೇಗಿದೆ?
– ʻಸಬ್ ಏರ್ ಸಿಸ್ಟಂʼ ಒಂದೇ ಆಧಾರ

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 18) ನಡೆಯಲಿರುವ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಹೆಚ್ಚಾಗಿದೆ.

ಕಳೆದ ಒಂದು ವಾರದಿಂದಲೂ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಶನಿವಾರವೂ ಗರಿಷ್ಠ 28°, ಕನಿಷ್ಠ 21° ಸೆಲ್ಸಿಯಸ್‌ ತಾಪಮಾನ ಇರಲಿದೆ. ಒಂದು ವೇಳೆ ಶನಿವಾರವೂ ನಗರದಲ್ಲಿ ಮಳೆಯಾದರೆ, ಪಂದ್ಯ ರದ್ದಾಗಲಿದ್ದು, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಇದರಿಂದ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಪ್ಲೇ ಆಫ್‌ ಪ್ರವೇಶಿಸಲಿದೆ. ಹಾಗಾಗಿ ಮೇ 18 ರಂದು ಯಾವುದೇ ಕಾರಣಕ್ಕೂ ಮಳೆಯಾಗದಿರಲಿ ಎಂದು ಆರ್‌ಸಿಬಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ- ಅರ್ಹತೆಗಳೇನು?

ಆರ್‌ಸಿಬಿ ತಂಡ ಈವರೆಗೆ ಆಡಿದ 13 ಪಂದ್ಯಗಳಿಂದ 12 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಉತ್ತಮ ನೆಟ್‌ ರನ್‌ರೇಟ್‌ ಆರ್‌ಸಿಬಿ ಕೈ ಹಿಡಿದಿದ್ದು, ಪ್ಲೇ ಆಫ್ಸ್‌ ಪ್ರವೇಶಿಸಲು ಎದುರು ನೋಡುತ್ತಿದೆ. ಆದ್ರೆ ಆರ್‌ಸಿಬಿಗೆ ಮ್ಯಾಜಿಕ್‌ ನಂಬರ್‌ 14 ಅಂಕಗಳನ್ನು ಸಂಪಾದಿಸಲು ಡಿಫೆಂಡಿಂಗ್‌ ಚಾಂಪಿಯನ್ಸ್‌ ಸಿಎಸ್‌ಕೆ ಎದುರು ಜಯಗಳಿಸಲೇಬೇಕಿದೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!

ಒಂದು ವೇಳೆ ಆರ್‌ಸಿಬಿ ರನ್‌ ಚೇಸ್‌ ಮಾಡಿದರೆ 18.1 ಓವರ್‌ಗಳ ಒಳಗೆ ಗೆಲ್ಲಬೇಕು. ಮೊದಲು ಬ್ಯಾಟ್‌ ಮಾಡಿದರೆ ಕನಿಷ್ಠ 18 ರನ್‌ಗಳಿಂದ ಗೆಲ್ಲಬೇಕು. ಈ ಸುಲಭ ಲೆಕ್ಕಾಚಾರದ ಗೆಲುವು ಕೂಡ ಆರ್‌ಸಿಬಿಗೆ ಅಗತ್ಯವಿದೆ. ಆದರೆ, ಆರ್‌ಸಿಬಿ ತಂಡದ ಎಲ್ಲಾ ಲೆಕ್ಕಾಚಾರಗಳಿಗೆ ಮಳೆ ತಣ್ಣೀರೆರಚುವ ಸಾಧ್ಯತೆ ಇದೆ. ಹವಾಮಾನ ವರದಿ ಪ್ರಕಾರ ಶನಿವಾರ ಸಂಜೆ 5-11ರ ವರೆಗೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ಮಳೆಗೆ ಬಲಿಯಾದ್ರೆ ಸಿಎಸ್‌ಕೆ 15 ಅಂಕಗಳೊಂದಿಗೆ ಪ್ಲೇ ಆಫ್‌ ಪ್ರವೇಶಿಸಲಿದೆ.

ʻಸಬ್‌ ಏರ್‌ ಸಿಸ್ಟಮ್‌ʼ ಒಂದೇ ಆಧಾರ:
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಿಸಬಹುದಾಗಿದೆ. ಉದಾಹರಣೆಗೆ ಒಂದು ಗಂಟೆ ಭಾರೀ ಮಳೆ ಸುರಿದರೆ ಕೇವಲ 7 ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು. ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನ ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದ್ದರಿಂದ ಮಳೆಯು 9 ಗಂಟೆ ವೇಳೆಗೆ ಬಿಡುವು ಕೊಟ್ಟರು ಕನಿಷ್ಠ ಓವರ್‌ಗಳ ಮಿತಿಯಲ್ಲಿ 9:30 ರಿಂದ ಪಂದ್ಯ ಆರಂಭಿಸಬಹುದಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ವಿಚಿತ್ರ ಕಾರಣಕ್ಕೆ ಔಟಾದ ಜಡೇಜಾ – ಏನಿದು ರೂಲ್ಸ್ 37.1.4?