ರೈಸ್‌ ಆಗಿದ್ದ ಸನ್‌ ತಾಪ ಇಳಿಸಿದ ಚೆನ್ನೈ; ಸಿಎಸ್‌ಕೆಗೆ 78 ರನ್‌ಗಳ ಭರ್ಜರಿ ಜಯ – 3ನೇ ಸ್ಥಾನಕ್ಕೆ ಜಿಗಿದ ಹಾಲಿ ಚಾಂಪಿಯನ್ಸ್‌!

ಚೆನ್ನೈ: ನಾಯಕ ರುತುರಾಜ್‌ ಗಾಯಕ್ವಾಡ್‌ (Ruturaj Gaikwad), ಡೇರಿಲ್‌ ಮಿಚೆಲ್‌ ಅವರ ಸ್ಫೋಟಕ ಬ್ಯಾಟಿಂಗ್‌, ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ (CSK vs SRH) ವಿರುದ್ಧ 78 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 9 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ.

ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 212 ರನ್‌ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡ 18.5 ಓವರ್‌ಗಳಲ್ಲೇ 134 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: T20 ವಿಶ್ವಕಪ್‌ಗೆ ಶೀಘ್ರದಲ್ಲೇ ಭಾರತ ತಂಡ ಪ್ರಕಟ; ರೋಹಿತ್‌ ಜೊತೆಗೆ ಆರಂಭಿಕ ಯಾರಾಗ್ತಾರೆ ಅನ್ನೋದೇ ಸಸ್ಪೆನ್ಸ್‌!

ಚೇಸಿಂಗ್‌ ಆರಂಭಿಸಿದ ಸನ್‌ ರೈಸರ್ಸ್‌ ತಂಡ ಆರಂಭದಿಂದಲೇ ವಿಕೆಟ್‌ ಕಳೆದುಕೊಂಡಿತು. ಸಿಕ್ಸರ್‌-ಬೌಂಡರಿ ಸಿಡಿಸುತ್ತಿದ್ದ ಅಗ್ರ ಕ್ರಮಾಂಕದ ಟಾಪ್‌ ಬ್ಯಾಟರ್ಸ್‌ಗಳು ಅಲ್ಪ ಮೊತ್ತಕ್ಕೆ ನೆಲ ಕಚ್ಚಿದರು. ಇದು ಚೆನ್ನೈ ತಂಡಕ್ಕೆ ಲಾಭವಾಯಿತು. ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ, ಏಡನ್‌ ಮಾರ್ಕ್ರಮ್‌ ಬ್ಯಾಕ್‌ ಟು ಬ್ಯಾಕ್‌ ಪೆವಿಲಿಯನ್‌ ಪರೇಡ್‌ ನಡೆಸಿದರು. ಹಾಗಾಗಿ ಸಹಜವಾಗಿಯೇ ಗೆಲುವು ಚೆನ್ನೈ ತಂಡದ ಪಾಲಾಯಿತು.

ಸನ್‌ ರೈಸರ್ಸ್‌ ತಂಡದ ಪರ ಟ್ರಾವಿಸ್‌ ಹೆಡ್‌ (Travis Head) 13 ರನ್‌, ಅಭಿಷೇಕ್‌ ಶರ್ಮಾ 15 ರನ್‌, ಏಡನ್‌ ಮಾರ್ಕ್ರಮ್‌ 32 ರನ್‌, ನಿತೀಶ್‌ ಕುಮಾರ್‌ ರೆಡ್ಡಿ 15 ರನ್‌, ಹೆನ್ರಿಕ್‌ ಕ್ಲಾಸೆನ್‌ 20 ರನ್‌, ಅಬ್ದುಲ್‌ ಸಮದ್‌ 19 ರನ್‌, ಪ್ಯಾಟ್‌ ಕಮ್ಮಿನ್ಸ್‌ 5 ರನ್‌, ಶಹಬಾಜ್‌ 7 ರನ್‌, ಜಯದೇವ್‌ ಉನದ್ಕಟ್‌ 1 ರನ್‌ ಗಳಿಸಿದ್ರೆ, ಭುವನೇಶ್ವರ್‌ ಕುಮಾರ್‌ 4 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಸಿಎಸ್‌ಕೆ ಮತ್ತೊಬ್ಬೆ ಬೌಲಿಂಗ್‌ ಪಿಚ್‌ನಲ್ಲಿ ರನ್‌ ಹೊಳೆ ಹರಿಸಿತ್ತು. 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 212 ರನ್‌ ಗಳಿಸಿತ್ತು. ಆರಂಭಿಕ ಅಜಿಂಕ್ಯಾ ರಹಾನೆ 9 ರನ್‌ಗಳಿಗೆ ವಿಕೆಟ್‌ ಕೈ ಚೆಲ್ಲಿದರೂ ಇತರ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಹಾಯದಿಂದ ಬೃಹತ್‌ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: 10 ಸಿಕ್ಸರ್‌ನೊಂದಿಗೆ ಸ್ಫೋಟಕ ಶತಕ – ಆರ್‌ಸಿಬಿಗೆ ವಿಲ್‌ ಪವರ್‌; ಟೈಟಾನ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

ಕೊನೇ ಓವರ್‌ನಲ್ಲಿ ಕೈತಪ್ಪಿದ ಶತಕ:
ಆರಂಭಿಕನಾಗಿ ಕಣಕ್ಕಿಳಿದಿದ್ದ ರುತುರಾಜ್‌ ಗಾಯಕ್ವಾಡ್‌ 54 ಎಸೆತಗಳಲ್ಲಿ 98 ರನ್‌ ಗಳಿಸಿದ್ದರು. ಇಂದು ತಮ್ಮ 2ನೇ ಐಪಿಎಲ್‌ ಶತಕ ದಾಖಲಿಸುವ ಉತ್ಸಾಹದಲ್ಲಿದ್ದರು. ಆದ್ರೆ 20ನೇ ಓವರ್‌ನ 2ನೇ ಎಸೆತದಲ್ಲೇ ಸಿಕ್ಸರ್‌ ಸಿಡಿಸಲು ಯತ್ನಿಸಿ ಬೌಂಡರಿ ಲೈನ್‌ ಬಳಿಕ ಕ್ಯಾಚ್‌ಗೆ ತುತ್ತಾದರು.

ಸಿಎಸ್‌ಕೆ ಪರ ರುತುರಾಜ್‌ ಗಾಯಕ್ವಾಡ್‌ 54 ಎಸೆತಗಳಲ್ಲಿ 98 ರನ್‌ (3 ಸಿಕ್ಸರ್‌, 10 ಬೌಂಡರಿ), ಡೇರಿಲ್‌ ಮಿಚೆಲ್‌ 52 ರನ್‌ (32 ಎಸೆತ, 7 ಬೌಂಡರಿ, 1 ಸಿಕ್ಸರ್‌), ಶಿವಂ ದುಬೆ 39 ರನ್‌ (20 ಎಸೆತ, 4 ಸಿಕ್ಸರ್‌, 1 ಬೌಂಡರಿ), ಅಜಿಂಕ್ಯಾ ರಹಾನೆ 9 ರನ್‌, ಎಂ.ಎಸ್‌ ಧೋನಿ 5 ರನ್‌ ಗಳಿಸಿದರು.

ಸನ್‌ ರೈಸರ್ಸ್‌ ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌, ಟಿ ನಟರಾಜನ್‌ ಹಾಗೂ ಜಯದೇವ್‌ ಉನಾದ್ಕಟ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.