ಅಂದು ಕ್ಯಾಪ್ಟನ್, ಇಂದು ಮೆಂಟರ್‌ ಆಗಿ ಟ್ರೋಫಿ‌ ಗೆದ್ದುಕೊಟ್ಟ ಗಂಭೀರ್‌; ಹಣೆಗೆ ಮುತ್ತಿಟ್ಟು ಖುಷಿ ಹಂಚಿಕೊಂಡ ಬಾದ್‌ ಷಾ

ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) ತಂಡವು ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಆದ್ರೆ ಕೆಕೆಆರ್‌ ಗೆಲುವಿನ ಹಿಂದೆ ಟೂರ್ನಿಯುದ್ಧಕ್ಕೂ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರ ಪಾತ್ರ ಅಷ್ಟೇ ಪ್ರಮುಖವಾಗಿದೆ.

ಹೌದು. ಮೊದಲಿನಿಂದಲೂ ಕೆಕೆಆರ್‌ ತಂಡದೊಂದಿಗೆ (KKR Team) ಅವಿನಾಭಾವ ಸಂಬಂಧ ಹೊಂದಿರುವ ಗೌತಮ್‌ ಗಂಭೀರ್‌ 2022, 2023ರಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. 2024ರಲ್ಲಿ ಮತ್ತೆ ತವರು ತಂಡಕ್ಕೆ ಮೆಂಟರ್‌ ಆಗಿ ಮರಳಿದ ಗಂಭೀರ್‌ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆಕೆಆರ್‌ ತಂಡದ ನಾಯಕನಾಗಿ ಮತ್ತು ಕೋಚ್‌ ಆಗಿ ಕೆಕೆಆರ್‌ ತಂಡಕ್ಕೆ ಮೂರು ಟ್ರೋಫಿ ಗೆದ್ದುಕೊಟ್ಟಿರುವುದು ಮತ್ತೊಂದು ವಿಶೇಷ.

2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ತಮ್ಮ ನಾಯಕತ್ವದಲ್ಲಿ ಕೆಕೆಆರ್‌ ತಂಡವನ್ನು ಚಾಂಪಿಯನ್‌ ಆಗಿ ಮಾಡಿದ್ದರು. ಇದೀಗ 10 ವರ್ಷಗಳ ಬಳಿಕ ಕೋಚ್‌ ಆಗಿ ತಂಡವನ್ನು ಮುನ್ನಡೆಸಿದ ಗಂಭೀರ್‌ ತಂಡವನ್ನು ಚಾಂಪಿಯನ್‌ ಆಗಿ ಮಾಡಿದ್ದಾರೆ. ಇದನ್ನೂ ಓದಿ: ಕೆಕೆಆರ್‌ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್‌

ಹಣೆಗೆ ಮುತ್ತಿಟ್ಟ ಶಾರುಖ್‌:
ಕೆಕೆಆರ್‌ ಗೆಲುವಿನ ಸಂಭ್ರಮಾಚರಣೆ ವೇಳೆ ಫ್ರಾಂಚೈಸಿ ಮಾಲೀಕರೂ ಆದ ನಟ ಶಾರುಖ್ ಖಾನ್, ಕೆಕೆಆರ್‌ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ ಅವರ ಹಣೆಗೆ ಮುತ್ತಿಟ್ಟು ಅಭಿನಂದನೆ ಸಲ್ಲಿಸಿದ್ದಾರೆ. ಕೆಕೆಆರ್‌ ತಂಡ ಗೆಲುವು ಸಾಧಿಸುತ್ತಿದ್ದಂತೆ ಮೈದಾನಕ್ಕೆ ಧುಮುಕಿದ ಬಾದ್‌ ಶಾ, ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಬಳಿಕ ತಂಡದ ಪ್ರತಿಯೊಬ್ಬ ಆಟಗಾರರಿಗೂ ಪ್ರೀತಿಯ ಅಪ್ಪುಗೆ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಮತ್ತೆ ತವರಿಗೆ ಮರಳಿ ಚಾಂಪಿಯನ್‌ ಕಿರೀಟ ಗೆದ್ದುಕೊಟ್ಟ ಗೌತಮ್‌ ಗಂಭೀರ್‌ ಅವರ ಗಣೆಗೆ ಮುತ್ತಿಟ್ಟು ಖುಷಿ ಹಂಚಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಗೌತಮ್‌ ಗಂಭೀರ್‌ ಸಾಧನೆ:
ಐಪಿಎಲ್‌ನಲ್ಲಿ ಗೌತಮ್‌ ಗಂಭೀರ್‌ ಅವರು ತಮ್ಮದೇ ವಿಶೇಷ ಸಾಧನೆ ಮಾಡಿದ್ದಾರೆ. ತಂಡವೊಂದರ ನಾಯಕನಾಗಿ 2 ಬಾರಿ ಹಾಗೂ ತಂಡವೊಂದರ ಕೋಚ್‌ ಆಗಿ 1 ಬಾರಿ ಐಪಿಎಲ್‌ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ನಾಯಕನಾಗಿ 3 ಬಾರಿ ಪ್ಲೇ ಆಫ್‌ ವರೆಗೆ ತಂಡವನ್ನು ಮುನ್ನಡೆಸಿದ್ದರೆ, ಕೋಚ್‌ ಆಗಿಯೂ ಮೂರು ಬಾರಿ ತಂಡವೊಂದನ್ನು ಮುನ್ನಡೆಸಿದ ಕೀರ್ತಿ ಇವರ ಹೆಸರಿಗಿದೆ.

2022ರ ಆವೃತ್ತಿಯಲ್ಲಿ ಐಪಿಎಲ್‌ ಪ್ರವೇಶಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಗೌತಮ್‌ ಗಂಭೀರ್‌ ಅವರ ನೇತೃತ್ವದಲ್ಲಿ ಮೊದಲ ಎರಡೂ ಆವೃತ್ತಿಗಳಲ್ಲಿ ಪ್ಲೇ ಆಫ್‌ ಪ್ರವೇಶಿಸಿತ್ತು. ಇದನ್ನೂ ಓದಿ:  IPL 2024 Champions: 10 ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌!