IPL 2023 Finals: ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು, ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್ – CSK ರನ್ನರ್ ಅಪ್?

ಅಹಮದಾಬಾದ್‌: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ಗುಜರಾತ್‌ ಟೈಟಾನ್ಸ್‌ (GT) ನಡುವಿನ ಫೈನಲ್ಸ್‌ (IPL Finals) ಪಂದ್ಯ ಭಾನುವಾರ ಮಳೆಯಿಂದಾಗಿ ರದ್ದಾಗಿದೆ. ಸೋಮವಾರವೂ (ಮೇ 29) ಮಳೆಯ ಆರ್ಭಟ ಮುಂದುವರಿದರೆ, ಲೀಗ್‌ ರ‍್ಯಾಂಕಿಂಗ್‌ ಪಟ್ಟಿಯ ಆಧಾರದ ಮೇಲೆ ಚಾಂಪಿಯನ್ಸ್‌ ಪಟ್ಟ ನಿರ್ಧರಿಸಲಾಗುತ್ತದೆ.

ಸೋಮವಾರ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ನಡುವೆ ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್‌ ಹೊರಬಿದ್ದಂತೆ ಕಾಣ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಎಲ್‌ಇಡಿ ಸ್ಕ್ರೀನ್‌ನ ಫೋಟೋವೊಂದು ಸದ್ದು ಮಾಡುತ್ತಿದೆ. ಭಾನುವಾರ ರಾತ್ರಿ ಮಳೆಯಿಂದಾಗಿ ಪಂದ್ಯವನ್ನ ರದ್ದು ಮಾಡಲಾಯಿತು. ಈ ವೇಳೆ ಕ್ರಿಕೆಟ್‌ ವೀಕ್ಷಣೆಗೆ ಇರಿಸಲಾಗಿದ್ದ ಎಲ್‌ಇಡಿ ಸ್ಕ್ರೀನ್‌ಬೋರ್ಡ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ರನ್ನರ್‌ ಅಪ್‌ ಎಂದು ತೋರಿಸಲಾಗುತ್ತಿತ್ತು. ಈ ಫೋಟೋ ಸಖತ್‌ ವೈರಲ್‌ ಆಗ್ತಿದೆ. ಇದರಿಂದ ಮತ್ತೆ ಕ್ರಿಕೆಟ್‌ ಅಭಿಮಾನಿಗಳನ್ನ ಗೊಂದಲಕ್ಕೀಡುಮಾಡಿದೆ, ಜೊತೆಗೆ ಮ್ಯಾಚ್‌ ಫಿಕ್ಸಿಂಗ್‌ ಸದ್ದು ಕೇಳಿಬರುತ್ತಿದೆ. ಇದನ್ನೂ ಓದಿ: ಐಪಿಎಲ್‌ಗೆ ಗುಡ್‌ ಬೈ ಹೇಳಿದ CSK ಸ್ಟಾರ್‌ ಅಂಬಾಟಿ ರಾಯುಡು

ಮತ್ತೆ ಮಳೆಯಾದ್ರೆ ಯಾರಿಗೆ ಲಾಭ?
ಹೌದು.. ನಿನ್ನೆಯಂತೆ ಇಂದೂ ಸಹ ಮಳೆ ಮುಂದುವರಿದು ರಾತ್ರಿ 9:40ರ ಒಳಗೆ ಬಿಡುವು ಸಿಕ್ಕರೆ ಸಂಪೂರ್ಣ 20 ಓವರ್‌ಗಳ ಪಂದ್ಯ ನಡೆಯಲಿದೆ. 5 ಓವರ್‌ಗಳ ಪಂದ್ಯವನ್ನಾಡಿಸಲು ರಾತ್ರಿ 12:06ರ ವರೆಗೆ ಸಮಯವಿರಲಿದೆ. ಅದೂ ಸಾಧ್ಯವಾಗದಿದ್ದಲ್ಲಿ ಸೂಪರ್‌ ಓವರ್‌ ಆಡಿಸಲು ರಾತ್ರಿ 12:50ರ ವರೆಗೆ ಸಮಯವಿರಲಿದೆ. ಒಂದು ವೇಳೆ ಸಂಪೂರ್ಣವಾಗಿ ಪಂದ್ಯ ರದ್ದಾದರೆ ಲೀಗ್‌ ಹಂತದ ಮುಕ್ತಾಯಕ್ಕೆ ಹೆಚ್ಚು ಅಂಕ ಪಡೆದ ತಂಡವನ್ನ ಚಾಂಪಿಯನ್‌ ಆಗಿ ಘೋಷಣೆ ಮಾಡಲಾಗುತ್ತದೆ. ಇದನ್ನೂ ಓದಿ: ಗಿಲ್‌ ಗಿಲ್‌ ಗಿಲ್‌ – ಕೊಹ್ಲಿ IPL ದಾಖಲೆ ಉಡೀಸ್‌ ಮಾಡ್ತಾರಾ ಗಿಲ್‌?

ಐಪಿಎಲ್‌ 14 ಲೀಗ್‌ ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಗುಜರಾತ್‌ ಟೈಟಾನ್ಸ್‌ +0.809 ರನ್‌ರೇಟ್‌ನೊಂದಿಗೆ 20 ಅಂಕ ಪಡೆದು ಅಗ್ರ ಸ್ಥಾನದಲ್ಲಿದೆ. ಆದ್ರೆ 14ರಲ್ಲಿ 8ರಲ್ಲಿ ಗೆಲುವು ಸಾಧಿಸಿರುವ‌ ಚೆನ್ನೈ ಸೂಪರ್‌ ಕಿಂಗ್ಸ್‌ +0.652 ರನ್‌ರೇಟ್‌ನೊಂದಿಗೆ 17 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಲೀಗ್‌ ಹಂತದ ಪಾಯಿಂಟ್ಸ್‌ ಆಧರಿಸಿ ಚಾಂಪಿಯನ್ಸ್‌ ನಿರ್ಧರಿಸುವುದಾದರೆ, ಗುಜರಾತ್‌ ಟೈಟಾನ್ಸ್‌ ಸತತ 2ನೇ ಬಾರಿಗೆ ಚಾಂಪಿಯನ್‌ ಕಿರೀಟ ಧರಿಸಲಿದೆ.