IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

ಮುಂಬೈ: 15ನೇ ಆವೃತ್ತಿ ಐಪಿಎಲ್‍ಗಾಗಿ ತಂಡಗಳು ಸಿದ್ಧತೆಯಲ್ಲಿದೆ. ಈ ನಡುವೆ ಆಸ್ಟ್ರೇಲಿಯಾದ ಮಾಜಿ ಆಲ್‍ರೌಂಡರ್ ಆಟಗಾರ ಶೇನ್ ವಾಟ್ಸನ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ಶೇನ್ ವಾಟ್ಸನ್ ಡೆಲ್ಲಿ ತಂಡ ಸೇರಿಕೊಂಡಿರುವುದು ಈ ಬಾರಿ ಆಟಗಾರನಾಗಿ ಅಲ್ಲ. ಸಹಾಯಕ ಕೋಚ್ ಆಗಿ. ವಾಟ್ಸನ್ 2020ರಲ್ಲಿ ಐಪಿಎಲ್ ಸಹಿತ ಎಲ್ಲಾ ಮಾದರಿ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಇದೀಗ ಐಪಿಎಲ್‌ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಇದನ್ನೂ ಓದಿ: ಐಪಿಎಲ್ 2022: ಅಗ್ರ ವಿದೇಶಿ ಆಟಗಾರರು ಲೀಗ್‍ನ ಮೊದಲ ವಾರದಲ್ಲಿ ಲಭ್ಯವಿರಲ್ಲ

ಈ ಹಿಂದೆ ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ವಾಟ್ಸನ್ ಭರ್ಜರಿ ಪ್ರದರ್ಶನ ನೀಡಿದ್ದರು. ಇದೀಗ ಮತ್ತೆ ಐಪಿಎಲ್‍ನಲ್ಲಿ ಕೋಚ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡೆಲ್ಲಿ ತಂಡದ ಹೆಡ್ ಕೋಚ್ ಆಗಿ ರಿಕಿ ಪಾಟಿಂಗ್ ಕಾರ್ಯನಿರ್ವಹಿಸುತ್ತಿದ್ದು, ಅವರೊಂದಿಗೆ ಸಹಾಯಕ ಕೋಚ್ ಆಗಿ ವಾಟ್ಸನ್ ಕಾಣಿಸಿಕೊಳ್ಳಲಿದ್ದಾರೆ.

ಡೆಲ್ಲಿ ತಂಡದ ಅಸಿಸ್ಟೆಂಟ್ ಕೋಚ್ ಆಗಿ ಸೇರ್ಪಡೆಗೊಂಡ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ವಾಟ್ಸನ್, ಐಪಿಎಲ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಲೀಗ್, ಈಗಾಗಲೇ ನಾನು ಐಪಿಎಲ್‍ನಲ್ಲಿ ಆಟಗಾರನಾಗಿ ಹಲವು ತಂಡ ಮತ್ತು ಆಟಗಾರೊಂದಿಗೆ ಆಡಿದ್ದೇನೆ. ಇದೀಗ ಕೋಚ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿದೆ. ಅದೂ ಕೂಡ ರಿಕಿ ಪಾಟಿಂಗ್ ಅವರಂತಹ ದಿಗ್ಗಜ ನಾಯಕ ಮತ್ತು ಕೋಚ್ ಆಗಿದ್ದವರೊಂದಿಗೆ ಕಾರ್ಯನಿರ್ವಹಿಸಲು ತುಂಬಾ ಉತ್ಸುಕನಾಗಿದ್ದೇನೆ ಎಂದರು. ಇದನ್ನೂ ಓದಿ: ಬೆಂಗಳೂರು ಮ್ಯಾಚ್ ವೇಳೆ ಕ್ರೀಡಾಂಗಣಕ್ಕೆ ನುಗ್ಗಿದ ಅಭಿಮಾನಿಗಳು – ನಾಲ್ವರು ಅರೆಸ್ಟ್

ವಾಟ್ಸನ್ ಐಪಿಎಲ್‍ನಲ್ಲಿ ಒಟ್ಟು 3,875 ರನ್ ಮತ್ತು 92 ವಿಕೆಟ್ ಕಿತ್ತಿದ್ದಾರೆ. ಅಲ್ಲದೆ 2008ರಲ್ಲಿ ಚಾಂಪಿಯನ್ ಆಗಿದ್ದ ರಾಜಸ್ಥಾನ ರಾಯಲ್ಸ್ ಮತ್ತು 2018ರಲ್ಲಿ ಐಪಿಎಲ್ ಟ್ರೋಫಿಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಲ್‍ರೌಂಡರ್ ಆಗಿ ವಾಟ್ಸನ್ ಮಿಂಚಿದ್ದರು.

Comments

Leave a Reply

Your email address will not be published. Required fields are marked *