ಆರ್‌ಸಿಬಿ ಬೌಲರ್‌ಗಳನ್ನು ಚೆಂಡಾಡಿದ ಬೈರ್‌ಸ್ಟೋವ್, ಲಿವಿಂಗ್‌ಸ್ಟೋನ್ – ಪಂಜಾಬ್ ಪ್ಲೇ ಆಫ್ ಆಸೆ ಜೀವಂತ

ಮುಂಬೈ: ಆರ್‌ಸಿಬಿ ಬೌಲರ್‌ಗಳನ್ನು ಚೆಂಡಾಡಿದ ಜಾನಿ ಬೈರ್‌ಸ್ಟೋವ್, ಲಿಯಾಮ್‌ ಲಿವಿಂಗ್‌ಸ್ಟೋನ್ ಬ್ಯಾಟಿಂಗ್ ಮೋಡಿಯ ಮುಂದೆ ಆರ್‌ಸಿಬಿ ಕಂಗಾಲಾಗಿ 54 ಗಳಿಂದ ಸೋಲುಂಡಿದೆ.

ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಆರ್‌ಸಿಬಿ 210 ರನ್‍ಗಳ ಕಠಿಣ ಗುರಿ ನೀಡಿದ ಪಂಜಾಬ್ ನಂತರ ಬೌಲಿಂಗ್‍ನಲ್ಲೂ ಆರ್‌ಸಿಬಿ ಬ್ಯಾಟ್ಸ್‌ಮ್ಯಾನ್‌ಗಳನ್ನು 20 ಓವರ್‌ಗಳಲ್ಲಿ 155 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಆರ್‌ಸಿಬಿ ವಿರುದ್ಧ 54 ರನ್‌ಗಳ ಅಂತರದ ಗೆಲುವಿನೊಂದಿಗೆ ಪಂಜಾಬ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಇತ್ತ ಆರ್‌ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ ಗೊಂಡಿದೆ.

ಪಂಜಾಬ್ ನೀಡಿದ ಬೃಹತ್ ಮೊತ್ತ ಬೆನ್ನಟ್ಟುವಲ್ಲಿ ಆರಂಭದಲ್ಲೇ ಎಡವಿದ ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ 20 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಡು ಫ್ಲೆಸಿಸ್ 10 ರನ್ (8 ಎಸೆತ, 2 ಬೌಂಡರಿ) ಸಿಡಿಸಿ ಪಂಜಾಬ್ ಬೌಲರ್‌ಗಳ ಮುಂದೆ ಮಂಡಿಯೂರಿದರು.

ನಂತರ ಜೊತೆಯಾದ ರಜತ್ ಪಾಟಿದಾರ್ ಮತ್ತು ಮ್ಯಾಕ್ಸ್‌ವೆಲ್ ಮೂರನೇ ವಿಕೆಟ್‍ಗೆ ವೇಗದ 64 ರನ್ (37 ಎಸೆತ) ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಪಾಟಿದರ್ 26 ರನ್ (21 ಎಸೆತ, 1 ಬೌಂಡರಿ, 2 ಸಿಕ್ಸ್) ಮತ್ತು ಮ್ಯಾಕ್ಸ್‌ವೆಲ್ 35 ರನ್ (22 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ವೇಗ ಪಡೆದಿದ್ದ ಆರ್‌ಸಿಬಿ ಚೇಸಿಂಗ್ ಮಂಕಾಯಿತು. ಆ ಬಳಿಕ ಬಂದ ದಿನೇಶ್ ಕಾರ್ತಿಕ್ 11 ರನ್ (11 ಎಸೆತ, 1 ಬೌಂಡರಿ) ಬಾರಿಸಿ ಔಟ್ ಆಗುವುದರೊಂದಿಗೆ ಗೆಲುವಿನ ಆಸೆ ಕಮರಿತು.

ಟಾಸ್ ಗೆದ್ದ ಬೆಂಗಳೂರು ಪಂಜಾಬ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿ ಕೈಸುಟ್ಟುಕೊಂಡಿತು. ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳ ಮೇಲೆ ಸವಾರಿ ನಡೆಸಿದ ಪಂಜಾಬ್‍ನ ಆರಂಭಿಕ ಜೋಡಿ ಮೊದಲ ವಿಕೆಟ್‍ಗೆ 60 ರನ್ (30 ಎಸೆತ) ಚಚ್ಚಿ ಉತ್ತಮ ಜೊತೆಯಾಟವಾಡಿತು.

ಬೈರ್‌ಸ್ಟೋವ್, ಲಿವಿಂಗ್‌ಸ್ಟೋನ್ ಅಬ್ಬರ
ಜಾನಿ ಬೈರ್‌ಸ್ಟೋವ್ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸುರಿಸಿದರೆ, ಶಿಖರ್ ಧವನ್ 21 ರನ್ (15 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಮ್ಯಾಕ್ಸ್‌ವೆಲ್ ಬೌಲಿಂಗ್‍ನಲ್ಲಿ ವಿಕೆಟ್ ಕೈಚೆಲ್ಲಿಕೊಂಡರು. ನಂತರ ಬೈರ್‌ಸ್ಟೋವ್ ಜೊತೆಯಾದ ಲಿವಿಂಗ್‌ಸ್ಟೋನ್ ನಿಧಾನವಾಗಿ ಅಬ್ಬರಿಸಲು ಆರಂಭಿಸಿದರು. ಆದರೆ ಇತ್ತ ಬೈರ್‌ಸ್ಟೋವ್ 66 ರನ್ (29 ಎಸೆತ, 4 ಬೌಂಡರಿ, 7 ಸಿಕ್ಸ್) ಚಚ್ಚಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆದರು.

ಅಕ್ಷರ್ ಪಟೇಲ್ ಮ್ಯಾಜಿಕ್ ಬೌಲಿಂಗ್
ಬೈರ್‌ಸ್ಟೋವ್ ವಿಕೆಟ್ ಕಳೆದುಕೊಂಡ ಬಳಿಕ ಅಕ್ಷರ್ ಪಟೇಲ್ ದಾಳಿಗೆ ಪಂಜಾಬ್ ಕುಸಿತಕ್ಕೊಳಗಾಯಿತು. ಆದರೆ ಇನ್ನೊಂದು ಕಡೆ ಲಿವಿಂಗ್‌ಸ್ಟೋನ್ ಆರ್‌ಸಿಬಿ ಬೌಲರ್‌ಗಳ ಚಳಿ ಬಿಡಿಸಿದರು. ಮೈದಾನ ಅಷ್ಟ ದಿಕ್ಕುಗಳಿಗೂ ಬೌಂಡರಿ, ಸಿಕ್ಸರ್‌ಗಳ ಮೂಲಕ ಬಾಲ್ ಪರಿಚಯಿಸಿದರು. ಕೊನೆಗೆ ಅವರ ಅಬ್ಬರದಾಟ 70 ರನ್ (42 ಎಸೆತ, 5 ಬೌಂಡರಿ, 4 ಸಿಕ್ಸ್)ಗೆ ಕೊನೆಗೊಳಿಸುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾದರು.

ಅಷ್ಟೊತ್ತಿಗಾಗಲೇ ಪಂಜಾಬ್ ತಂಡ 200ರ ಗಡಿದಾಟಿತ್ತು. ಅಂತಿಮವಾಗಿ ಪಂಜಾಬ್ 9 ವಿಕೆಟ್ ನಷ್ಟಕ್ಕೆ 209 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಆರ್‌ಸಿಬಿ ಪರ ಬೌಲಿಂಗ್‍ನಲ್ಲಿ ಹರ್ಷಲ್ ಪಟೇಲ್ 4 ವಿಕೆಟ್ ಕಿತ್ತು ಮಿಂಚಿದರು.

ರನ್ ಏರಿದ್ದು ಹೇಗೆ?
50 ರನ್ 23 ಎಸೆತ
100 ರನ್ 54 ಎಸೆತ
150 ರನ್ 88 ಎಸೆತ
200 ರನ್ 114 ಎಸೆತ
209 ರನ್ 120 ಎಸೆತ

Comments

Leave a Reply

Your email address will not be published. Required fields are marked *