ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

ಮುಂಬೈ: ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಲಕ್ನೋ ತಂಡದ ಬೌಲರ್ ಕೃನಾಲ್ ಪಾಂಡ್ಯ ಬೌಲಿಂಗ್‍ನಲ್ಲಿ ವಿಕೆಟ್ ಕಳೆದುಕೊಂಡ ಮುಂಬೈ ಬ್ಯಾಟ್ಸ್‌ಮ್ಯಾನ್‌ ಕೀರನ್ ಪೋಲಾರ್ಡ್ ಪೆವಿಲಿಯನ್‍ಗೆ ಹೆಜ್ಜೆಹಾಕುತ್ತಿದ್ದಂತೆ ಪಾಂಡ್ಯ ಮುತ್ತುಕೊಟ್ಟು ಸಂಭ್ರಮಿಸಿದ ಫೋಟೋ ವೈರಲ್ ಆಗುತ್ತಿದೆ.

ಈ ಹಿಂದೆ ಕೃನಾಲ್ ಪಾಂಡ್ಯ ಮತ್ತು ಪೋಲಾರ್ಡ್ ಮುಂಬೈ ತಂಡದಲ್ಲಿ ಜೊತೆಯಾಗಿ ಆಡುತ್ತಿದ್ದರು. ಆದರೆ 15ನೇ ಅವೃತ್ತಿ ಐಪಿಎಲ್‍ನಲ್ಲಿ ಪೋಲಾರ್ಡ್ ಮುಂಬೈ ತಂಡದ ಪರ ಆಡುತ್ತಿದ್ದರೆ, ಪಾಂಡ್ಯ ಲಕ್ನೋ ಪರ ಆಡುತ್ತಿದ್ದಾರೆ. ಆದರೂ ಇವರಿಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. ನಿನ್ನೆಯ ಪಂದ್ಯದಲ್ಲಿ ಇವರಿಬ್ಬರ ನಡುವೆ ರೋಚಕ ಹಣಾಹಣಿ ನಡೆದಿತ್ತು. ಇದನ್ನೂ ಓದಿ: ರಾಹುಲ್ ತೂಫಾನ್ – ಮುಂಬೈಗೆ ಸೋಲಿನ ಬರೆ

ಕೃನಾಲ್ ಪಾಂಡ್ಯ ವಿಕೆಟ್‍ನ್ನು ಪೋಲಾರ್ಡ್ ಕಿತ್ತಿದ್ದರು. ಆ ಬಳಿಕ ಮುಂಬೈ ತಂಡದ ಗೆಲುವಿಗಾಗಿ ಹೋರಾಡುತ್ತಿದ್ದ ಪೋಲಾರ್ಡ್ 19 ರನ್ (20 ಎಸೆತ, 1 ಸಿಕ್ಸ್) ಸಿಡಿಸಿ ಅಪಾಯಕಾರಿಯಾಗಿ ಗೋಚರಿಸುತ್ತಿದ್ದಾಗ ದಾಳಿಗಿಳಿದ ಕೃನಾಲ್ ಪಾಂಡ್ಯ, ಪೋಲಾರ್ಡ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವಿಕೆಟ್ ಪಡೆದ ಬಳಿಕ ಪೆವಿಲಿಯನ್‍ಗೆ ಹೊರಟ ಪೋಲಾರ್ಡ್ ಬಳಿ ತೆರಳಿದ ಪಾಂಡ್ಯ ಮುತ್ತು ಕೊಟ್ಟು ಸಂಭ್ರಮಿಸಿದರು. ಈ ವೀಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: 3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ನಾನು ದೇವರಿಗೆ ಧನ್ಯವಾದ ತಿಳಿಸುತ್ತೇನೆ. ಪೋಲಾರ್ಡ್ ವಿಕೆಟ್ ಸಿಗದೇ ಇದ್ದಿದ್ದರೆ ನನಗೆ ಜೀವನಪೂರ್ತಿ ಕಾಡುತ್ತಿತ್ತು. ಇದೀಗ 1-1 ಸಮಬಲಗೊಂಡಿದೆ. ಪೋಲಾರ್ಡ್ ಮಾತನಾಡದಂತಾಗಿದೆ ಎಂದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮತ್ತು ಮೈಕಲ್ ಕ್ಲಾರ್ಕ್ ಸಂಬಂಧ ಕೆಡಲು ಐಪಿಎಲ್ ಕಾರಣ: ಸೈಮಂಡ್ಸ್

ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಶತಕದಾಟ ಮತ್ತು ಲಕ್ನೋ ಬೌಲರ್‌ಗಳ ಶ್ರೇಷ್ಠ ನಿರ್ವಹಣೆಯ ಫಲವಾಗಿ 36 ರನ್‍ಗಳಿಂದ ಗೆದ್ದಿತು. ಈ ಮೂಲಕ ಮುಂಬೈ ಟೂರ್ನಿಯಲ್ಲಿ ಸತತ 8ನೇ ಸೋಲು ಕಂಡು ಮತ್ತೆ ನಿರಾಸೆ ಅನುಭವಿಸಿತು.

Comments

Leave a Reply

Your email address will not be published. Required fields are marked *