ಡೆಲ್ಲಿ ದರ್ಬಾರ್‌ಗೆ ಪಂಜಾಬ್ ಪಂಚರ್ – 10 ಓವರ್‌ಗಳಲ್ಲಿ ಟಾರ್ಗೆಟ್ ಉಡೀಸ್

ಮುಂಬೈ: ಪಂಜಾಬ್ ವಿರುದ್ಧ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಮೂರು ವಿಭಾಗದಲ್ಲೂ ಮೇಲುಗೈ ಸಾಧಿಸಿದ ಡೆಲ್ಲಿ 9 ವಿಕೆಟ್‌ಗಳಿಂದ ಸಲಿಸಾಗಿ ಪಂದ್ಯ ಗೆದ್ದುಕೊಂಡಿದೆ.

ಪಂಜಾಬ್ ನೀಡಿದ 116 ರನ್‍ಗಳ ಅಲ್ಪಮೊತ್ತದ ಗುರಿ ಪಡೆದ ಡೆಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 10.3 ಓವರ್‌ಗಳಲ್ಲಿ ಇನ್ನೂ 57 ಎಸೆತ ಬಾಕಿ ಇರುವಂತೆ 9 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.

ಪಂಜಾಬ್ ನೀಡಿದ ಅಲ್ಪಮೊತ್ತವನ್ನು ಬೆನ್ನಟಿದ ಡೆಲ್ಲಿಗೆ ಆರಂಭಿಕ ಜೋಡಿ ಪೃಥ್ವಿ ಶಾ ಮತ್ತು ವಾರ್ನರ್ ನಾ ಮುಂದು ತಾ ಮುಂದು ಎಂಬಂತೆ ಬ್ಯಾಟ್ ಬೀಸಲು ಆರಂಭಿಸಿದರು. ಪಂಜಾಬ್ ಬೌಲರ್‌ಗಳ ಎಸೆತಗಳನ್ನು ಪಟಪಟನೇ ಬೌಂಡರಿಗಟ್ಟಿ ಮೆರೆದಾಡಿದ ಈ ಜೋಡಿ ಮೊದಲ ವಿಕೆಟ್‍ಗೆ 83 ರನ್ (39 ಎಸೆತ) ಚಚ್ಚಿ ಗೆಲುವು ಖಾತ್ರಿ ಪಡಿಸಿತು. ಪೃಥ್ವಿ ಶಾ 41 ರನ್ (20 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಆದರೆ ಇತ್ತ ವಾರ್ನರ್ ಮಾತ್ರ ಕಳೆದ ಪಂದ್ಯದ ಮುಂದುವರಿದ ಭಾಗ ಎಂಬಂತೆ ಬ್ಯಾಟ್‍ಬೀಸಿ ಅಜೇಯ 60 ರನ್ (30 ಎಸೆತ, 10 ಬೌಂಡರಿ 1 ಸಿಕ್ಸ್‌) ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡದ ಬ್ಯಾಟ್ಸ್‌ಮ್ಯಾನ್‌ಗಳು ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿದರು. ಆರಂಭಿಕರಾದ ಮಯಾಂಕ್ ಅಗರ್‌ವಾಲ್ 24 ರನ್ (15 ಎಸೆತ, 4 ಬೌಂಡರಿ) ಮತ್ತು ಶಿಖರ್ ಧವನ್ 9 ರನ್ (10 ಎಸೆತ, 1 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿಕೊಂಡರು.

ನಂತರ ಆರಂಭವಾದ ಕುಸಿತದಿಂದ ಚೇತರಿಸಿಕೊಳ್ಳಲು ಪಂಜಾಬ್‍ಗೆ ಸಾಧ್ಯವಾಗಲೇ ಇಲ್ಲ. ಡೆಲ್ಲಿ ಬೌಲರ್‌ಗಳ ಕರಾರುವಾಕ್ ದಾಳಿಗೆ ನಲುಗಿದ ಪಂಜಾಬ್ ತಂಡದ ದಾಂಡಿರು ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಪಂಜಾಬ್ ಪರ ಜಿತೇಶ್ ಶರ್ಮಾ ಸಿಡಿಸಿದ 32 ರನ್ (20 ಎಸೆತ) ತಂಡದ ಪರ ಹೆಚ್ಚಿನ ಗಳಿಕೆಯಾಗಿದೆ. ಅಂತಿಮವಾಗಿ 20 ಓವರ್‌ಗಳ ಅಂತ್ಯಕ್ಕೆ 115 ರನ್ ಗಳಿಗೆ ಪಂಜಾಬ್ ಸರ್ವಪತನ ಕಂಡಿತು.

ಡೆಲ್ಲಿ ಪರ ಖಲೀಲ್ ಅಹಮ್ಮದ್, ಲಲಿತ್ ಯಾದವ್, ಅಕ್ಷರ್ ಪಟೇಲ್ ಮತ್ತು ಕುಲ್‍ದೀಪ್ ಯಾದವ್ ತಲಾ 2 ವಿಕೆಟ್ ಹಂಚಿಕೊಂಡರೆ, ಮುಸ್ತಫಿಜುರ್ ರೆಹಮಾನ್ 1 ವಿಕೆಟ್ ಪಡೆದು ಪಂಜಾಬ್ ಕುಸಿತಕ್ಕೆ ಕಾರಣರಾದರು.

Comments

Leave a Reply

Your email address will not be published. Required fields are marked *