ಸೋಲು ಗೆಲುವಿನ ಭಾಗ – ಅಭಿಮಾನಿಗಳು ಆರ್‌ಸಿಬಿ ಪರವೇ ಎಂದ್ರು ರಾಗಿಣಿ

ಬೆಂಗಳೂರು: 2019ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಸತತ 6 ಸೋಲುಂಡರು ಕೂಡ ಅಭಿಮಾನಿಗಳು ಕೊಹ್ಲಿ ಬಳಗಕ್ಕೆ ಸ್ಫೂರ್ತಿ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಇದರ ನಡುವೆಯೇ ನಟಿ ರಾಗಿಣಿ ಅವರು ಕೂಡ ಎಂದಿಗೂ ಅಭಿಮಾನಿಗಳು ಆರ್ ಸಿಬಿಯೊಂದಿಗೆ ಇರುತ್ತಾರೆ ಎಂದು ಟ್ವೀಟ್ ಮಾಡಿ ಬೆಂಬಲ ನೀಡಿದ್ದಾರೆ.

ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದೀರಿ. ಸೋಲು ಗೆಲುವಿನ ಒಂದು ಭಾಗವೇ ಆಗಿದೆ. ಆದ್ದರಿಂದ ಕುಗ್ಗದೆ ಮುನ್ನಡೆಯಿರಿ, ಅಭಿಮಾನಿಗಳು ನಿಮ್ಮೊಂದಿಗೆ ಇರುತ್ತಾರೆ ಎಂದು ರಾಗಿಣಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದಿನ ಐಪಿಎಲ್ ಟೂರ್ನಿ ಗಳಿಗೆ ಹೋಲಿಸಿದರೆ ಈ ಬಾರಿ ಆರ್ ಸಿಬಿ ಅಭಿಮಾನಿಗಳು ಹೆಚ್ಚು ಬೆಂಬಲವನ್ನು ನೀಡಿ ಪ್ರಚಾರ ಮಾಡಿದ್ದರು. ಆದರೆ ಸತತ 6 ಪಂದ್ಯಗಳಲ್ಲಿ ಸೋತಿರುವ ಆರ್ ಸಿಬಿ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಎಷ್ಟೇ ಪಂದ್ಯ ಸೋತರೂ ಕೂಡ ನಮ್ಮ ಬೆಂಬಲ ನಮ್ಮ ತಂಡಕ್ಕೆ ಮಾತ್ರ ಎನ್ನುತ್ತಿದ್ದಾರೆ ಅಭಿಮಾನಿಗಳು. ಇತ್ತ ಸಾಮಾಜಿಕ ಜಾಲತಾಣದಲ್ಲಿ ಆರ್ ಸಿಬಿ ತಂಡದ ವಿರುದ್ಧ ಟ್ರೋಲ್ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.

ಗೇಲ್ ಹಿಂದಿಕ್ಕಿದ ಕೊಹ್ಲಿ: ಟೂರ್ನಿಯಲ್ಲಿ ಆರ್ ಸಿಬಿ ಗೆಲುವು ಪಡೆಯದೆ ಇದ್ದರು ಕೂಡ ನಾಯಕ ಕೊಹ್ಲಿ ತಮ್ಮ ಫಾರ್ಮ್ ಮುಂದುವರೆಸಿದ್ದು, ಇಂದಿನ ಪಂದ್ಯದಲ್ಲಿ 41 ರನ್ ಗಳಿಸಿ ನಿರ್ಗಮಿಸಿದ್ದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 802 ರನ್ ಸಿಡಿಸಿ ಗೇಲ್ ರನ್ನು ಹಿಂದಿಕ್ಕಿದ್ದಾರೆ. ತಂಡವೊಂದರ ವಿರುದ್ಧವಾಗಿ ಐಪಿಎಲ್ ನಲ್ಲಿ ಅತಿ ಹೆಚ್ಚು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಗೇಲ್ 797 ರನ್ ಗಳಿಸಿ 2ನೇ ಸ್ಥಾನ ಪಡೆದಿದ್ದರು. ಗೇಲ್ ಪಂಜಾಬ್ ತಂಡ ವಿರುದ್ಧ 797 ರನ್ ಗಳಿಸಿದ್ದಾರೆ. ಪ್ರಸ್ತುತ ಆವೃತ್ತಿಯಲ್ಲಿ ಗೇಲ್ ಪಂಬಾಜ್ ಪರ ಆಡುತ್ತಿದ್ದಾರೆ. ಈ ಹಿಂದಿನ ಟೂರ್ನಿಗಳಲ್ಲಿ ಅವರು ಪಂಜಾಬ್ ವಿರುದ್ಧವೇ ಹೆಚ್ಚು ರನ್ ಸಿಡಿಸಿದ್ದರು. ಉಳಿದಂತೆ ಪಟ್ಟಿಯಲ್ಲಿ 803 ರನ್ ಗಳಿಸಿರುವ ರೈನಾ ಮೊದಲ ಸ್ಥಾನದಲ್ಲಿದ್ದು, ಮುಂಬೈ ವಿರುದ್ಧ ಈ ಸಾಧನೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *