ಮಂಗ್ಳೂರಿನಲ್ಲಿ ಇಂಟರ್‌ನೆಟ್ ಸೇವೆ ಪುನಾರಂಭ

– ಪೊಲೀಸರ ಕ್ರಮಕ್ಕೆ ಶಬ್ಬಾಶ್‍ಗಿರಿ

ಮಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಕಾವು ಸದ್ಯಕ್ಕೆ ತಣ್ಣಗಾಗಿದೆ. ಎರಡು ದಿನಗಳು ಇಂಟರ್‌ನೆಟ್ ಇಲ್ಲದೆ ಇದ್ದಿದ್ದೇ ಪ್ರತಿಭಟನೆ ತಣ್ಣಗಾಗಲೂ ಕಾರಣ ಎನ್ನಲಾಗಿದ್ದು, ಸ್ಥಗಿತಗೊಂಡಿದ್ದ ಇಂಟರ್‌ನೆಟ್ ಸೇವೆ ಮತ್ತೆ ಪ್ರಾರಂಭಗೊಂಡಿದೆ.

ಪೌರತ್ವ ಕಿಚ್ಚಿನಿಂದ ಶಾಂತಿಗೆ ಮರಳಿರುವ ಮಂಗಳೂರಿನಲ್ಲಿ ಶನಿವಾರ ರಾತ್ರಿ 10 ಗಂಟೆಯಿಂದಲೇ ಇಂಟರ್‌ನೆಟ್ ಸೇವೆ ಪ್ರಾರಂಭವಾಗಿದೆ. ಗುರುವಾರ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ 48 ಗಂಟೆಗಳ ಕಾಲ ಮಂಗಳೂರಿನಾದ್ಯಂತ ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿತ್ತು. ಈಗ ಮಂಗಳೂರಿನಲ್ಲಿ ಶಾಂತಿ ಕಂಡುಬಂದಿದ್ದು ಇಂಟರ್‌ನೆಟ್ ಸೇವೆ ಪುನಾರಂಭಗೊಂಡಿದೆ.

ಇಂಟರ್‌ನೆಟ್ ಸೇವೆ ಇದ್ದಿದ್ದರೆ ಪ್ರತಿಭಟನೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇತ್ತು. ಒಬ್ಬರೊಬ್ಬರಿಗೆ ಮೆಸೇಜ್‍ಗಳನ್ನ ರವಾನೆ ಮಾಡಿಕೊಂಡು ಗುಂಪು-ಗುಂಪು ಸೇರಿ ದೊಡ್ಡ ಮಟ್ಟದ ಗಲಭೆ ನಡೆಸುವ ಸಾಧ್ಯತೆ ಇತ್ತು. ಇದನ್ನ ಮನಗಂಡ ಮಂಗಳೂರು ಪೊಲೀಸರು 48 ಗಂಟೆಗಳ ಕಾಲ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದ್ದರು. ಪೊಲೀಸರ ಪ್ಲ್ಯಾನ್‍ನಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಜನರಿಗೆ ಇಂಟರ್‌ನೆಟ್ ಸೇವೆ ಸ್ಥಗಿತದಿಂದ ಸ್ವಲ್ಪ ತೊಂದರೆ ಆಗಿದ್ದರೂ ಅದರಿಂದ ಆಗಬಹುದಾದ ಅನಾಹುತವನ್ನ ಪೊಲೀಸರು ತಪ್ಪಿಸಿ ಮಹತ್ವದ ಕೆಲಸ ಮಾಡಿದ್ದಾರೆ.

48 ಗಂಟೆಗಳ ಬಳಿಕ ಇಂಟರ್‍ನೆಟ್ ಸೇವೆ ಮತ್ತೆ ಮಂಗಳೂರಿನಲ್ಲಿ ಪ್ರಾರಂಭವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜನರು ಎಚ್ಚರವಹಿಸಬೇಕು. ಪ್ರಚೋದನಕಾರಿ ಮೆಸೇಜ್‍ಗಳು ರವಾನೆ ಮಾಡಬಾರದು ಎಂದು ಪೊಲೀಸರು ಕೂಡ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *