ವಿಶ್ವ ಯೋಗ ದಿನಾಚರಣೆ: ಶಾಸಕರ ಭವನದಲ್ಲಿ ಬೆರಳೆಣಿಕೆಯಷ್ಟೇ ಶಾಸಕರು ಭಾಗಿ!

ಬೆಂಗಳೂರು: ಇಂದು ವಿಶ್ವದಾದ್ಯಂತ ಮೂರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ದೇಶದೆಲ್ಲೆಡೆ ಯೋಗ ದಿನವನ್ನು ಆಚರಿಸುತ್ತಿದ್ದು, ಬೆಂಗಳೂರಿನ ಯಶವಂತಪುರ, ಕಂಠೀರವ ಸ್ಟುಡಿಯೋ ಹಾಗೂ ಶಾಸಕರ ಭವನ ಸೇರಿದಂತೆ ಹಲವೆಡೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ವಿಶ್ವ ಯೋಗದಿನಾಚರಣೆ ಹಿನ್ನೆಲೆಯಲ್ಲಿ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇವಲ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಭಾಗಿಯಾಗಿದ್ದಾರೆ.

ಸ್ಪೀಕರ್ ಕೋಳಿವಾಡ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಈಶ್ವರಪ್ಪ, ಬಸವರಾಜ ಹೊರಟ್ಟಿ, ಸಿ.ಟಿ.ರವಿ, ಮಾಜಿ ಆರೋಗ್ಯ ಸಚಿವ ಮಾಲಕರೆಡ್ಡಿ, ಪರಿಷತ್ ಸದಸ್ಯೆಯರಾದ ವೀಣಾ ಅಚ್ಚಯ್ಯ, ಜಯಮ್ಮ ಸೇರಿದಂತೆ 18 ಮಂದಿ ಶಾಸಕರು ಪಾಲ್ಗೊಂಡಿದ್ದರು. ಸ್ಪೀಕರ್ ಕೋಳಿವಾಡ ಅವರು ನೆಲದ ಮೇಲೆ ಕುಳಿತು ಯೋಗಾಸಾನಮಾಡಲು ಸಾಧ್ಯವಿಲ್ಲ ಎಂದು ಕುರ್ಚಿ ಮೇಲೆ ಕುಳಿತು ಯೋಗಾಸಾನ ಮಾಡಿದ್ದಾರೆ. ಯೋಗ ಮಾಡಲು ಶಾಸಕರು ನಿರಾಸಕ್ತಿ ತೋರಿಸಿದ್ದು, ಹೀಗಾಗಿ ಯೋಗಾ ತರಬೇತುದಾರರು ಶಾಸಕರಿಗಾಗಿ ಕಾದು ಕಾದು ಸುಸ್ತಾಗಿದ್ದಾರೆ ಎನ್ನಲಾಗಿದೆ. 299 ವಿಧಾನಮಂಡಲ ಸದಸ್ಯರಲ್ಲಿ 20 ಮಂದಿ ಮಾತ್ರ ಭಾಗಿಯಾಗಿರುವುದು ವಿಶೇಷ.

ಯಶವಂತಪುರದ ವರ್ಲ್ಡ್ ಟ್ರೇಡ್ ಸೆಂಟರ್‍ನಲ್ಲಿ ಕೂಡ ಅಕ್ಷರ ಪವರ್ ಯೋಗದಿಂದ ಆಯೋಜಿಸಿದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಇನ್ನು ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂದೆ ನಡೆದ ಯೋಗ ದಿನಾಚರಣೆಯಲ್ಲಿ ಬಿಎಸ್ ಯಡಿಯೂರಪ್ಪ, ಶಾಸಕ ಅಶ್ವತ್ ನಾರಾಯಣ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಕೂಡ ಆರೋಗ್ಯ ಇಲಾಖೆಯಿಂದ ಮೂರನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದಾರೆ. ಹಲವಾರು ಯೋಗಪಟುಗಳು ಕೂಡ ಪಾಲ್ಗೊಳ್ಳುವ ಮೂಲಕ ಈ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

 

Comments

Leave a Reply

Your email address will not be published. Required fields are marked *