ರಾಜ್ಯ ಸಚಿವ ಸಂಪುಟ ವಿಸ್ತರಣೆ ಬದಲು ಪುನಾರಚನೆಗೆ ಕಸರತ್ತು

ಬೆಂಗಳೂರು: ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ ಹಬ್ಬದ ನಂತರವೂ ಆಗಲ್ಲ ಎಂದು ತಿಳಿದುಬಂದಿದೆ.

ಪಬ್ಲಿಕ್ ಟಿವಿಗೆ ಸಿಕ್ಕಿರೋ ಎಕ್ಸ್ ಕ್ಲೂಸಿವ್ ಮಾಹಿತಿ ಪ್ರಕಾರ, ಸಂಪುಟ ವಿಸ್ತರಣೆ ಬದಲಿಗೆ ಪುನಾರಚನೆಯಾಗುವ ಸಾಧ್ಯತೆ ಹೆಚ್ಚಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸಂಪುಟ ರಿಷಫಲ್ ಮಾಡಲು ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಸಂಪುಟ ಪುನಾರಚನೆಗೆ ಮುನ್ನ ಸಚಿವರ ಮೌಲ್ಯ ಮಾಪನ ಮಾಡಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ.

ಆಗಸ್ಟ್ 31ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಎಲ್ಲಾ ಸಚಿವರ ಜೊತೆ ಪ್ರತ್ಯೇಕ ಸಭೆ ನಡೆಸಲಿದ್ದು, ಪ್ರತಿಯೊಬ್ಬರ ಮೌಲ್ಯಮಾಪನ ಮಾಡಲಿದ್ದಾರೆ. ಈ ವೇಳೆ ಇಲಾಖಾ ಪ್ರಗತಿ, ಪಕ್ಷ ಸಂಘಟನೆ, ಉಸ್ತುವಾರಿ ಜಿಲ್ಲೆಗಳಲ್ಲಿನ ಕಾರ್ಯಗಳನ್ನು ಪರೀಕ್ಷಿಸಲಿದ್ದಾರೆ. ಇದಾದ ಬಳಿಕ ಹೈಕಮಾಂಡ್ ಜೊತೆ ಚರ್ಚಿಸಿ ಕಳಪೆ ಪ್ರದರ್ಶನ ತೋರಿದ ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಜಿಲ್ಲಾ ಉಸ್ತುವಾರಿಯೂ ಬದಲಾಗುವ ಸಾಧ್ಯತೆಯಿದೆ. ಇದೇ ಸಂದರ್ಭದಲ್ಲಿ ಖಾಲಿಯಿರುವ ಮೂರು ಖಾತೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಬೆಳವಣಿಗೆ ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಅಗ್ನಿ ಪರೀಕ್ಷೆ ಎಂಬಂತಾಗಿದೆ.

Comments

Leave a Reply

Your email address will not be published. Required fields are marked *