ಬಿಜೆಪಿಯ ಮಂಗಳೂರು ಚಲೋಗೆ ಕ್ಷಣಗಣನೆ-ಸಮಾವೇಶಕ್ಕಷ್ಟೇ ಅನುಮತಿ, ರ‍್ಯಾಲಿಗಿಲ್ಲ ಪರ್ಮಿಷನ್!

ಮಂಗಳೂರು: ಇಂದು ನಡೆಯುವ ಮಂಗಳೂರು ಚಲೋ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರದ ಪ್ರತಿಷ್ಠೆಯ ವೇದಿಕೆಯಾಗಿದೆ. ಗಲಭೆಯಿಂದ ತತ್ತರಿಸಿ ಕೆಲವೇ ದಿನಗಳ ಹಿಂದೆ ಸಹಜ ಸ್ಥಿತಿಗೆ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕಿತ್ತಾಟಕ್ಕೆ ತಯಾರಿಗಳು ನಡೆದಿದೆ. ಮತ್ತೆ ಶಾಂತಿಗೆ ತೊಡಕಾಗುತ್ತದೆ ಎಂದು ಪೊಲೀಸ್ ಇಲಾಖೆಯಿಂದ ಅನುಮತಿ ನೀಡದಿದ್ದರೂ, ಮಂಗಳೂರು ಚಲೋಗೆ ಬಿಜೆಪಿ ಪ್ರತಿಷ್ಠೆಯ ಪಣ ತೊಟ್ಟಿದೆ.

ರಮಾನಾಥ್ ರೈ ರಾಜೀನಾಮೆ, ಪಿಎಫ್‍ಐ ಮತ್ತು ಎಸ್‍ಡಿಪಿಐ ನಿಷೇಧಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಮಂಗಳೂರು ರ‍್ಯಾಲಿಗೆ ಇವತ್ತು ಕೊನೆಯ ದಿನ. ಈ ಬೈಕ್ ರ‍್ಯಾಲಿಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಇದರಿಂದ ಕೋಪಗೊಂಡಿರುವ ಬಿಜೆಪಿ ಬ್ರಿಗೇಡ್ ಮಂಗಳೂರು ಚಲೋ ಮಾಡಿಯೇ ಮಾಡುತ್ತೇವೆ. ನಮ್ಮನ್ನು ಪೊಲೀಸ್ ಶಕ್ತಿಯಿಂದ ತಡೆದರೂ ನಿಗದಿ ಮಾಡಿದಂತೆ ಇಂದು ಮಂಗಳೂರಿನಲ್ಲಿ ರ‍್ಯಾಲಿ ಮಾಡ್ತೇವೆ ಅಂತ ಪಟ್ಟು ಹಿಡಿದಿದೆ.

ಬೆಳಗ್ಗೆ 11 ಗಂಟೆಗೆ ಜ್ಯೋತಿ ವೃತ್ತದಿಂದ 1 ಸಾವಿರ ಬೈಕ್ ಮತ್ತು 5 ಸಾವಿರ ಜನ ರ‍್ಯಾಲಿ ಮತ್ತು ಪಾದಯಾತ್ರೆ ಕೈಗೊಂಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕ್ತೀವಿ ಅಂತಾ ಬಿಜೆಪಿ ಹೇಳಿದೆ. ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುವ ಸಭೆಯಲ್ಲಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ರ‍್ಯಾಲಿ, ವಾಹನ ಜಾಥಾ ಮಾಡದಂತೆ ಮಂಗಳೂರು ಪೊಲೀಸ್ ಕಮೀಷನರ್ ಪೊಲೀಸ್ ಕಾಯ್ದೆ 35ರಡಿ ನಿರ್ಬಂಧ ಹೇರಿದ್ದಾರೆ. ಆದ್ರೆ ಬೆಳಗ್ಗೆ 11ರಿಂದ ಮಧ್ಯಾಹ್ನ 2ರ ಮಧ್ಯೆ ಮಾತ್ರ ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ನೆಹರು ಮೈದಾನದಲ್ಲಿ ಸಭೆಗೆ ಅನುಮತಿ ನೀಡಿದ್ದಾರೆ.

ಮಂಗಳೂರು ನಗರದಲ್ಲಿ ಟೈಟ್ ಸೆಕ್ಯೂರಿಟಿ: ಮಂಗಳೂರು ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಇತರೆ ಜಿಲ್ಲೆಗಳ 7 ಎಸ್‍ಪಿಗಳು, 12 ಡಿವೈಎಸ್‍ಪಿಗಳು, 135 ಸಿಬ್ಬಂದಿಯ ಒಂದು ರಾಪಿಡ್ ಆಕ್ಷನ್ ಫೋರ್ಸ್ ತುಕಡಿ, 15 ಕೆಎಸ್‍ಆರ್‍ಪಿ, 12 ಸಿಎಆರ್ ತುಕಡಿ ಸೇರಿದಂತೆ ಒಟ್ಟು 4,500 ಪೊಲೀಸರನ್ನು ಭದ್ರತೆಗೆ ನಿಯೋಜನೆಗೊಳಿಸಲಾಗಿದೆ. ಭದ್ರತೆಗೆ ವಿಶೇಷ ಉಸ್ತುವಾರಿಯಾಗಿ ಈ ಹಿಂದೆ ಮಂಗಳೂರಿನಲ್ಲಿ ಕಮಿಷನರ್ ಆಗಿದ್ದ ಪ್ರಸ್ತುತ ಸಿಐಡಿ ಐಜಿಪಿ ಎಂ.ಚಂದ್ರಶೇಖರ್ ಆಗಮಿಸಿದ್ದಾರೆ.

ಸಭೆಗೆ ಮಾತ್ರ ಡಿಸಿ ಅವಕಾಶ ಕೊಟ್ಟಿದ್ದು,ರ‍್ಯಾಲಿ ನಡೆಸಿದರೆ ಕ್ರಮಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ. ಆದ್ರೆ ಪೊಲೀಸರ ಶಕ್ತಿಯನ್ನ ಮೆಟ್ಟಿ ಬೈಕ್ ರ‍್ಯಾಲಿ ನಡೆಸ್ತೇವೆ ಅಂತ ಬಿಜೆಪಿ ಹೇಳ್ತಿದೆ. ಹೀಗಾಗಿ ಮಂಗಳೂರು ಇವತ್ತು ಭಾರೀ ಕುತೂಹಲದ ಕೇಂದ್ರ ಬಿಂದುವಾಗಿದೆ.

https://twitter.com/ShobhaBJP/status/905285694444142592

https://twitter.com/ShobhaBJP/status/905041223064313856

Comments

Leave a Reply

Your email address will not be published. Required fields are marked *