ಅತಿಥಿ ಗೃಹವಿದ್ರೂ ಸ್ಟಾರ್ ಹೋಟೆಲ್‍ಗಳಲ್ಲಿ ಗಣ್ಯರಿಗೆ ರೂಮ್ ಬುಕ್- 4 ವರ್ಷಗಳಲ್ಲಿ ಸರ್ಕಾರಕ್ಕೆ ಲಾಸ್ ಆಗಿದ್ದೆಷ್ಟು ಗೊತ್ತಾ?

ಬೆಂಗಳೂರು: ರಾಜ್ಯಕ್ಕೆ ಬರೋ ಗಣ್ಯರಿಗೆಂದೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅದ್ಧೂರಿ ಅತಿಥಿ ಗೃಹವಿದೆ. ಆದ್ರೆ ಅಧಿಕಾರಿಗಳು ಮಾತ್ರ ಆ ಗೆಸ್ಟ್ ಹೌಸ್ ಬದಲಿಗೆ ಸ್ಟಾರ್ ಹೋಟೆಲ್‍ಗಳಲ್ಲೇ ಅತಿಥಿಗಳಿಗೆ ಸತ್ಕಾರ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟುಮಾಡ್ತಿದ್ದಾರೆ.

ಕುಮಾರ ಕೃಪ ಅತಿಥಿ ಗೃಹ ರಾಜ್ಯಕ್ಕೆ ಆಗಮಿಸುವ ಗಣ್ಯರ ಆತಿಥ್ಯಕ್ಕೆಂದು ಸರ್ಕಾರ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಅದ್ಧೂರಿ ಗೆಸ್ಟ್‍ಹೌಸ್. ಅತ್ಯುತ್ತಮ ಸೌಕರ್ಯ ಹೊಂದಿರುವ ಈ ಅತಿಥಿ ಗೃಹದ ಉಪಯೋಗ ಮಾತ್ರ ಶೂನ್ಯ. ಯಾಕಂದ್ರೆ ನಮ್ಮ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸುವ ಗಣ್ಯರಿಗೆ ಸ್ಟಾರ್ ಹೋಟೆಲ್‍ಗಳನ್ನೇ ಬುಕ್ ಮಾಡ್ತಿದ್ದಾರೆ. ಇದರಿಂದಾಗಿ ಕಳೆದ 4 ವರ್ಷಗಳಲ್ಲಿ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ವೃಥಾ ಖರ್ಚಾಗಿದೆ.

ಕುಮಾರ ಕೃಪ ಅತಿಥಿ ಗೃಹದಲ್ಲಿ ಯಾವ ಸ್ಟಾರ್ ಹೋಟೆಲ್‍ಗಳಿಗೂ ಕಮ್ಮಿಯಿಲ್ಲದ 12 ವಿವಿಐಪಿ ರೂಂಗಳು ಇವೆ. 26 ಸಾಮಾನ್ಯ ರೂಂಗಳಿವೆ. ಆದ್ರೂ ತಾಜ್‍ವೆಸ್ಟ್ ಎಂಡ್, ದಿ ಕ್ಯಾಪಿಟಲ್, ಐಟಿಸಿ ಗಾರ್ಡೇನೀಯ, ಲಲಿತ ಮಹಲ್, ವಿಂಡ್ಸರ್ ಮ್ಯಾನರ್ ಸ್ಟಾರ್ ಹೋಟೆಲ್‍ಗಳಲ್ಲೇ ರೂಂ ಬುಕ್ ಮಾಡಿ, ಲಕ್ಷಾಂತರ ರೂಪಾಯಿ ಬಿಲ್ ಪಾವತಿಸಲಾಗಿದೆ. ಸಾಮಾಜಿಕ ಹೋರಾಟಗಾರ ಮರಿಲಿಂಗೇಗೌಡ ಮಾಲೀ ಪಾಟೀಲ್ ಆರ್‍ಟಿಐ ಅಡಿ ಈ ಎಲ್ಲಾ ಮಾಹಿತಿಯನ್ನ ಪಡೆದಿದ್ದಾರೆ.

ಜೊತೆಗೆ ಅತಿಥಿಗೃಹದ ನಿರ್ವಹಣೆಗೂ ಕೋಟ್ಯಂತರ ರೂಪಾಯಿ ಹಣವನ್ನು ಸರ್ಕಾರ ವ್ಯಯಿಸುತ್ತಿದೆ. ಆದ್ರೂ ಅಧಿಕಾರಿಗಳು ದುಡ್ಡು ಹೊಡೆಯಲು ಗಣ್ಯರಿಗೆ ಸ್ಟಾರ್ ಹೋಟೆಲ್‍ಗಳಲ್ಲಿ ರೂಂ ಬುಕ್ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡ್ತಿದ್ದಾರೆ. ನಮ್ ತೆರಿಗೆ ದುಡ್ಡಲ್ಲಿ ಈ ತರಾದ ಶೋಕಿ ಎಷ್ಟು ಸರಿ ಅನ್ನೋದು ಜನಸಾಮಾನ್ಯರ ಪ್ರಶ್ನೆ.

Comments

Leave a Reply

Your email address will not be published. Required fields are marked *