ಕರ್ನಾಟಕದಲ್ಲಿ ಮೂಲಸೌಕರ್ಯ ಕೆಟ್ಟದಾಗಿದೆ, ಪವರ್‌ ಕಟ್‌ ಸಮಸ್ಯೆಯಿದೆ: ಆಂಧ್ರ ಐಟಿ ಸಚಿವ

– ರಾಜ್ಯದ ಉದ್ಯಮಿಗಳ ಹೇಳಿಕೆಯನ್ನು ಉಲ್ಲೇಖಿಸಿ ಟಾಂಗ್‌ ನೀಡಿದ ನಾರಾ ಲೋಕೇಶ್‌
– ಕರ್ನಾಟಕ ಮೊದಲು ಈ ಸಮಸ್ಯೆ ಸರಿಮಾಡಬೇಕು

ಹೈದರಾಬಾದ್‌: ಕರ್ನಾಟಕದ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಮೂಲಸೌಕರ್ಯ ಕೆಟ್ಟದಾಗಿದೆ, ವಿದ್ಯುತ್ ಕಡಿತವಿದೆ ಎಂದು ಹೇಳುತ್ತಾರೆ. ಕರ್ನಾಟಕ ಮೊದಲು ಆ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಹೇಳಿದ್ದಾರೆ.

ವಿಶಾಖಪಟ್ಟಣದಲ್ಲಿ ಗೂಗಲ್‌ ಎಐ ಕೇಂದ್ರ ತೆರೆಯುವ ಸಂಬಂಧ ಮಾಡಿಕೊಂಡ ಒಪ್ಪಂದಕ್ಕೆ ಕರ್ನಾಟಕ ನಾಯಕರು ಪ್ರಶ್ನೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಅವರು ಉತ್ತರ ನೀಡಿದರು.

ಕಂಪನಿಗಳನ್ನು ಸೆಳೆಯಲು ಅವರು ಅಸಮರ್ಥರಾಗಿದ್ದರೆ ನಾನು ಏನು ಮಾಡಲು ಸಾಧ್ಯವಿಲ್ಲ. ಗೂಗಲ್‌ ಜೊತೆ ಸಹಿ ಹಾಕುವ ಒಂದು ದಿನದ ಮೊದಲು ಹಲವು ರಾಜ್ಯಗಳು ತಮ್ಮ ರಾಜ್ಯಕ್ಕೆ ಬರುವಂತೆ ಪ್ರಯತ್ನ ಮಾಡಿದ್ದವು. ನಾವು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತೇವೆ. ವಿಶಾಖಪಟ್ಟಣದಲ್ಲಿ ಗೂಗಲ್‌ ಕೇಂದ್ರ ತೆರೆಯಲು ನಾವು ಹಲವಾರು ಸಭೆಗಳನ್ನು ನಡೆಸಿದ್ದೇವೆ. ಏನೇನು ಸಮಸ್ಯೆಯಾಗಿತ್ತು ಅವುಗಳನ್ನು ನಾವು ಪರಿಹರಿಸಿಕೊಟ್ಟಿದ್ದೇವೆ ಎಂದರು.

ರಾಜ್ಯ ರಾಜ್ಯಗಳ ಮಧ್ಯೆ ಈ ರೀತಿಯ ಸ್ಪರ್ಧೆ ಇರಬೇಕು. ಸ್ಪರ್ಧೆ ಇದ್ದರೆ ಅಂತಿಮವಾಗಿ ಲಾಭ ಭಾರತಕ್ಕೆ ಆಗಲಿದೆ. ಕಂಪ್ಯೂಟರ್‌ ಕ್ರಾಂತಿಯಾಗುವ ಸಂದರ್ಭದಲ್ಲಿ ಹಲವು ಮಂದಿ ಕಂಪ್ಯೂಟರ್‌ ಆಹಾರ ನೀಡುತ್ತಾ ಎಂದು ಪ್ರಶ್ನಿಸಿದ್ದರು. ಆದರೆ ನಮ್ಮ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರು  ಅಂದು ಕಂಪನಿಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಹೈದರಾಬಾದ್‌ ಇಂದು ಟೆಕ್‌ ಸಿಟಿಯಾಗಿದೆ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ ಎಂದು ತಿಳಿಸಿದರು.

ಗೂಗಲ್‌ ಆಂಧ್ರಕ್ಕೆ ಹೋಗಿದ್ದಕ್ಕೆ ಬಿಜೆಪಿ ಮತ್ತು ಜೆಡಿಎಸ್‌ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿವೆ. ಉದ್ಯಮಿಗಳಿಗೆ ಬೆದರಿಕೆ ಹಾಕುವುದು, ಮೂಲಸೌಕರ್ಯ ಅಭಿವೃದ್ಧಿ ಮಾಡದೇ ಇರುವ ಕಾರಣ ಕಂಪನಿಗಳು ರಾಜ್ಯವನ್ನು ತೊರೆಯುತ್ತಿವೆ ಎಂದು ದೂರಿವೆ.  ಇದನ್ನೂ ಓದಿ:  ಟ್ರಂಪ್‌ಗೆ ಗೂಗಲ್‌ ಟಕ್ಕರ್‌| ವಿಶಾಖಪಟ್ಟಣದಲ್ಲಿ ಎಐ-ಹಬ್‌ಗಾಗಿ 1500 ಕೋಟಿ ಡಾಲರ್‌ ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಇದ್ದ ಘನತೆ, ಆಕರ್ಷಣೆ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಲಕ್ಷಾಂತರ ವಿದ್ಯಾವಂತ ನಿರುದ್ಯೋಗಿಗಳ ಉದ್ಯೋಗ ಸೃಷ್ಟಿಯ ಬೆಟ್ಟ ಕರಗುತ್ತಿದೆ, ಯುವ ಜನರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಎಲ್ಲೆಂದರಲ್ಲಿ ಗುಂಡಿ ಬಿದ್ದ ರಾಜಧಾನಿಯ ಪರಿಸ್ಥಿತಿಗೆ ‘ಅಂತರಾಷ್ಟ್ರೀಯ ಉದ್ಯಮಗಳು ಬೆಂಗಳೂರಿನಿಂದ ವಿಮುಖವಾಗುತ್ತಿವೆ’. ರಾಜ್ಯಕ್ಕೆ ಬರಬೇಕಿದ್ದ ಜಾಗತಿಕ ದಿಗ್ಗಜ ಗೂಗಲ್‌ ಸಂಸ್ಥೆಯ ಬರೋಬ್ಬರಿ 30,000 ಉದ್ಯೋಗ ಸೃಷ್ಟಿಯ ಗುರಿ ಹೊಂದಿರುವ 1.3 ಲಕ್ಷ ಕೋಟಿ ರೂ ಹೂಡಿಕೆ ನೆರೆ ರಾಜ್ಯ ಆಂಧ್ರ ಪ್ರದೇಶದ ಪಾಲಾಗಿದೆ.

ವಿಶ್ವದ ಜನರನ್ನು ಸೆಳೆಯುತ್ತಿದ್ದ ಬೆಂಗಳೂರನ್ನು ‘ಗುಂಡಿಗಳ ಬೆಂಗಳೂರು’ ಎಂಬ ಅಪಖ್ಯಾತಿ ಅಂಟಿಸಿರುವ ಈ ಸರ್ಕಾರದ ನಡೆಯಿಂದಾಗಿ ಹಾಗೂ ಬೆಂಗಳೂರು ಉಸ್ತುವಾರಿ ಹೊತ್ತ ಡಿಕೆ ಶಿವಕುಮಾರ್‌ ಅವರ ಇಚ್ಚಾಶಕ್ತಿ ಹಾಗೂ ವೈಫಲ್ಯದ ಕಾರಣದಿಂದಾಗಿ ಕನ್ನಡಿಗರಿಗೆ ಸಿಗಬೇಕಿದ್ದ ಸಾವಿರಾರು ಉದ್ಯೋಗಗಳು ನೆರೆ ರಾಜ್ಯದ ಪಾಲಾಗುತ್ತಿವೆ.  ಅಭಿವೃದ್ಧಿಯನ್ನು ಸಂಪೂರ್ಣ ಮರೆತ ಕಾಂಗ್ರೆಸ್ ಸರ್ಕಾರ ಕನಿಷ್ಠ ಬಂಡವಾಳ ಹೂಡುವ ಉದ್ಯಮ ಕ್ಷೇತ್ರವನ್ನೂ ಹಿಡಿದಿಟ್ಟುಕೊಳ್ಳುವ ಪ್ರಾಮಾಣಿಕ ಕಾಳಜಿಯ ಪ್ರತೀಕವಾಗಿ, ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸುವಲ್ಲಿಯೂ ವಿಫಲವಾಗಿರುವುದು ಕರ್ನಾಟಕ ರಾಜ್ಯದ ದುರಂತವೇ ಸರಿ ಎಂದು ಸಿಟ್ಟು ಹೊರಹಾಕಿವೆ.