ಭಾರತ್ ಬಂದ್‍ಗೆ ರಾಮನಗರ ಕೈಗಾರಿಕಾ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ

ರಾಮನಗರ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಜಿಲ್ಲೆಯಲ್ಲಿನ ಎರಡೂ ಕೈಗಾರಿಕಾ ಪ್ರದೇಶದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಮನಗರದಲ್ಲಿ ಬೆಳಗ್ಗೆ 5:40ಕ್ಕೆ ಸರ್ಕಾರಿ ಬಸ್ಸುಗಳು ಬಸ್ ನಿಲ್ದಾಣಕ್ಕೆ ಆಗಮಿಸಿದ್ದವು. ಅಲ್ಲದೇ ಜಿಲ್ಲೆಯಾದ್ಯಂತ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಆಗಲಿಲ್ಲ. ದಿನನಿತ್ಯದಂತೆ ಬಸ್, ಕ್ಯಾಬ್, ಆಟೋಗಳು ರಸ್ತೆಗಿಳಿದು ಸಂಚಾರ ನಡೆಸುತಿತ್ತು.

ಬಂದ್ ವಿಚಾರವಾಗಿ ಯಾವುದೇ ಸಂಘಟನೆಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರತಿಭಟನೆ, ರಸ್ತೆತಡೆ, ಮೆರವಣಿಗೆ, ಧರಣಿ ನಡೆಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ರಾಮನಗರ ಎಸ್‍ಪಿ ಅನೂಪ್ ಎ ಶೆಟ್ಟಿ ಆದೇಶಿಸಿದ್ದರು. ಆದ್ದರಿಂದ ಪ್ರತಿಭಟನಾಕಾರರು ರಸ್ತೆಗೆ ಇಳಿಯುವ ಕೆಲಸ ಮಾಡಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಪ್ರತಿಭಟನೆಗಳೇ ನಡೆಯದೇ ಬಂದ್ ನೀರಸವಾಗಿತ್ತು.

ಜಿಲ್ಲೆಯ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಖಾನೆಗಳನ್ನು ಮುಚ್ಚುವಂತೆ ಸಿಐಟಿಯು ಕೈಗಾರಿಕೆಗಳಿಗೆ ಸಂದೇಶ ರವಾನಿಸಿತ್ತು. ಅಲ್ಲದೇ ಕಾರ್ಮಿಕರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿತ್ತು.

ಆದರೆ ಎರಡೂ ಕೈಗಾರಿಕಾ ಪ್ರದೇಶಗಳು ಸಹ ಸ್ಥಬ್ಧವಾಗಿರಲಿಲ್ಲ. ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 130ಕ್ಕೂ ಹೆಚ್ಚು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದರೆ, ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 100ಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಆದರೆ ಇಂದು ಭಾರತ್ ಬಂದ್ ಇದ್ದರೂ ಕೆಲವೇ ಕೆಲವು ಕಾರ್ಖಾನೆಗಳು ಬಂದ್ ಆಗಿವೆ. ಬಹುತೇಕ ಕಾರ್ಖಾನೆಗಳು ದಿನನಿತ್ಯದಂತೆ ಕಾರ್ಯನಿರ್ವಹಿಸುತಿತ್ತು. ಕಾರ್ಖಾನೆಗಳು ಬಂದ್ ಮಾಡದಿದ್ದರೂ ಸಹ ಕಾರ್ಮಿಕರು ಕೆಲಸಕ್ಕೆ ಗೈರಾಗಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು.

Comments

Leave a Reply

Your email address will not be published. Required fields are marked *