ಪ್ರಿಯತಮನ ಆತ್ಮದ ಹೆಸರಲ್ಲಿ 15 ವರ್ಷ ಕಾಲ ಗುಹೆಯಲ್ಲಿ ಕೂಡಿಹಾಕಿ ವೃದ್ಧನ ಸೆಕ್ಸ್!

ಜಕಾರ್ತ: ಯುವತಿಯೊಬ್ಬಳನ್ನು ಗುಹೆಯಲ್ಲಿ ಕೂಡಿ ಹಾಕಿ ತನ್ನ ಕಾಮತೃಷೆಗೆ 15 ವರ್ಷಗಳ ಕಾಲ ಬಳಸಿಕೊಂಡ 83 ವರ್ಷದ ಮಂತ್ರವಾದಿ ಹಾಗೂ ನಕಲಿ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು ಮಂತ್ರವಾದಿಯ ಮನೆಯ ಸಮೀಪದಲ್ಲೇ ಇದ್ದ ಗುಹೆಯಲ್ಲಿ ಯುವತಿ ಕಾಣಿಸಿಕೊಂಡ ಬಳಿಕ ಪ್ರಕರಣ ಬಯಲಿಗೆ ಬಂದಿದೆ.

ಆಗಿದ್ದೇನು?
2003ರಲ್ಲಿ ಆಕೆ 13ರ ಬಾಲಕಿ. ಆಕೆಯ ಪೋಷಕರು ಚಿಕಿತ್ಸೆಗೆಂದು ಆಕೆಯನ್ನು 2003ರಲ್ಲಿ ನಕಲಿ ವೈದ್ಯನ ಬಳಿಗೆ ಕರೆ ತಂದಿದ್ದರು. ಚಿಕಿತ್ಸೆಗೆಂದು ಆಕೆಯನ್ನು ಅಲ್ಲೇ ಬಿಟ್ಟು ಪೋಷಕರು ತೆರಳಿದ್ದರು. ಇದಾದ ಕೆಲವು ದಿನಗಳ ನಂತರ ಮಗಳನ್ನು ನೋಡಲು ಪೋಷಕರು ವಾಪಸ್ ಬಂದಾಗ ಮಂತ್ರವಾದಿ ಕಟ್ಟುಕತೆ ಹೆಣೆದ. ಆಕೆ ಕೆಲಸ ಹುಡುಕಿಕೊಂಡು ಇಲ್ಲಿಂದ ಜಕಾರ್ತಾಗೆ ಹೊರಟಿದ್ದಾಳೆ ಎಂದು ಹೇಳಿ ಅವರನ್ನು ನಂಬಿಸಿದ್ದ. ಇದಾದ ಬಳಿಕ 15 ವರ್ಷಗಳ ಕಾಲ ಆಕೆಯ ಪೋಷಕರು ಎಲ್ಲಾ ಪ್ರಯತ್ನ ಮಾಡಿದರೂ ಯುವತಿಯ ಸುಳಿವು ಸಿಕ್ಕಿರಲೇ ಇಲ್ಲ. ಆದರೆ ಕಳೆದ ವಾರ ಆಕೆ ಗುಹೆಯೊಂದರಲ್ಲಿ ಕಾಣಿಸಿಕೊಂಡಿದ್ದಾಳೆ ಎಂಬ ರಹಸ್ಯ ವಿವರ ಬಹಿರಂಗವಾದ ಬೆನ್ನಲ್ಲೇ ಪೋಷಕರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಖಚಿತ ಮಾಹಿತಿ ಆಧರಿಸಿ ಹೋದ ಪೊಲೀಸರಿಗೆ ಆಕೆ ಗುಹೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಸದ್ಯ ಆಕೆ ಪೊಲೀಸರ ವಶದಲ್ಲಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಏನ್ಮಾಡ್ತಿದ್ದ ಮಂತ್ರವಾದಿ?
ಪೊಲೀಸರು ಹೇಳುವ ಪ್ರಕಾರ, ಜಾಗೋ ಎಂಬ ಹೆಸರಿನ ಈತ ಅಮ್ರೀನ್ ಎಂಬಾತನ ಫೋಟೋ ತೋರಿಸಿ ಈತ ನಿನ್ನ ಬಾಯ್ ಫ್ರೆಂಡ್. ಆತನ ಆತ್ಮ ನನ್ನ ದೇಹ ಪ್ರವೇಶಿಸಿದೆ. ಅವನ ಶಕ್ತಿಯನ್ನು ನಾನು ಪಡೆದಿದ್ದೇನೆ ಎಂದು ಆಕೆಯನ್ನು ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಆರಂಭಿಸಿದ್ದ. ಇದರಿಂದಾಗಿ ಆಕೆ ಕಳೆದ 10 ವರ್ಷಗಳಲ್ಲಿ ಹಲವು ಬಾರಿ ಗರ್ಭಿಣಿಯಾಗಿದ್ದಾಳೆ. ಆಗ ಜಾಗೋ ಆಕೆಗೆ ಗರ್ಭಪಾತ ಮಾಡಿಸಿದ್ದ ಎಂದು ತನಿಖೆ ವೇಳೆ ಬಯಲಾಗಿದೆ. ಜಾಗೋ ನಡೆಸಿರುವ ಕೃತ್ಯಗಳು ಸಾಬೀತಾದರೆ 15 ವರ್ಷ ಕಾಲ ಜೈಲು ವಾಸ ಖಚಿತ ಎಂದು ಇಂಡೋನೇಷ್ಯಾದ ಕಾನೂನು ತಜ್ಞರು ಹೇಳುತ್ತಿದ್ದಾರೆ.

ಹಗಲೆಲ್ಲಾ ಯುವತಿಯನ್ನು ಗುಹೆಯಲ್ಲಿರುವಂತೆ ಮಾಡಿದ್ದ ಜಾಗೋ ರಾತ್ರಿಯಾಗುತ್ತಿದ್ದಂತೆಯೇ ಅದರ ಪಕ್ಕದಲ್ಲೇ ಇದ್ದ ಗುಡಿಸಲಿಗೆ ಕರೆ ತಂದು ಆಕೆಯ ಜೊತೆ ಸೆಕ್ಸ್ ಮಾಡುತ್ತಿದ್ದ ಎಂಬ ವಿಚಾರವನ್ನೂ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತನ ವಿಚಾರಣೆ ವೇಳೆ 2008ರಿಂದ ತಾನು ಯುವತಿ ಜೊತೆ ಸೆಕ್ಸ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಯುವತಿ ಮಂತ್ರವಾದಿಯ ಸಂಬಂಧಿ..!
ಇನ್ನೂ ಅಚ್ಚರಿಯ ವಿಚಾರವೆಂದರೆ ಮಂತ್ರವಾದಿ ಜಾಗೋನ ಪುತ್ರ ಈ ಯುವತಿಯ ಸೋದರಿಯನ್ನು ಮದುವೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆಕೆಗೂ ಈ ಪ್ರಕರಣದಲ್ಲಿ ಏನಾದರೂ ಸಂಬಂಧವಿದೆಯೇ ಎಂದೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಗ್ರಾಮದಲ್ಲಿ ಈ ವ್ಯಕ್ತಿ ಭಾರೀ ಗೌರವಯುತ ವ್ಯಕ್ತಿಯಾಗಿದ್ದ. ಆದರೆ ಈ ಪ್ರಕರಣ ಬೆಳಕಿಗೆ ಬಂದ ನಂತರ ಈ ರೀತಿಯ ಇನ್ನೂ ಯಾವುದಾದರೂ ಪ್ರಕರಣ ನಡೆದಿರಬಹುದೇ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಯುವತಿಯ ಸೋದರಿಯೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಈ ವಿವರ ಇಟ್ಟುಕೊಂಡೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಯುವತಿಗಾಗಿ ಹುಡುಕಾಟ ಆರಂಭಿಸಿದ್ದರು.

15 ವರ್ಷಗಳಿಂದ ಯುವತಿ ಗುಹೆಯಲ್ಲೇ ವಾಸ ಮಾಡಿದ್ದರಿಂದ ಈಗ ಜನರ ಜೊತೆ ಬೆರೆಯಲು ಹಿಂದೆ ಮುಂದೆ ನೋಡುತ್ತಿದ್ದಾಳೆ. ಆಲ್ಲದೆ ಜನರನ್ನು ಕಂಡ ತಕ್ಷಣ ನಾನು ಗುಹೆಗೆ ವಾಪಸ್ ಹೋಗುತ್ತೇನೆ. ಜನರನ್ನು ನೋಡಿದರೆ ನನಗೆ ಭಯವಾಗುತ್ತದೆ ಎಂದು ಹೇಳುತ್ತಿದ್ದಾಳೆ. ಗುಹೆಯಲ್ಲಿ ಯುವತಿ ಪತ್ತೆಯಾದ ಬಳಿಕ ಜನರು ತಂಡೋಪತಂಡವಾಗಿ ಗುಹೆಯ ಬಳಿ ಆಗಮಿಸುತ್ತಿದ್ದು, ಇದೊಂದು ಪಿಕ್ನಿಕ್ ಸ್ಪಾಟ್ ಆಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Comments

Leave a Reply

Your email address will not be published. Required fields are marked *