ಹೊಸ ವರ್ಷದ ಆರಂಭದಲ್ಲೇ ಪ್ರವಾಹದ ಹೊಡೆತಕ್ಕೆ ನಲುಗಿದ ಇಂಡೋನೇಷ್ಯಾ – 16 ಮಂದಿ ಸಾವು

– ಹಾವು ಮೊಸಳೆಗಳು ರಸ್ತೆಯಲ್ಲಿ
– 20 ಸಾವಿರ ಮಂದಿಗೆ ನೆರೆಯಿಂದ ಸಂಕಷ್ಟ

ಜಕಾರ್ತ: ಇಡೀ ಜಗತ್ತು ಬುಧವಾರ ಹೊಸ ವರ್ಷದ ಸಂಭ್ರಮದಲ್ಲಿ ತೇಲಾಡಿದರೆ ದ್ವೀಪ ರಾಷ್ಟ್ರ ಇಂಡೋನೇಷ್ಯಾ ಮಾತ್ರ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿಹೋಗಿದೆ.

ಇಂಡೋನೇಷ್ಯಾದಲ್ಲಿ ನೆರೆ ಆರ್ಭಟ ಮೈ ಜುಮ್ಮೆನಿಸುವಂತಿದ್ದು, ರಾಜಧಾನಿ ಜಕಾರ್ತವಂತೂ ನೀರಿನಲ್ಲಿ ಮುಳುಗಿ ಹೋಗಿದೆ. ಈವರೆಗೆ ನೆರೆ ಸಿಲುಕಿ ಸುಮಾರು 16 ಮಂದಿ ಸಾವನ್ನಪ್ಪಿದ್ದಾರೆ. 20 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಇನ್ನು ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ. ಜನರ ಜೀವನವಂತೂ ಮೂರಾಬಟ್ಟೆಯಾಗಿದೆ.

ಕೆಲವಡೆ ನೆರೆಯಿಂದ ಸಿಲುಕಿದವರನ್ನು ರಕ್ಷಣಾ ಸಿಬ್ಬಂದಿ ಬೋಟ್‍ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸುತ್ತಿದ್ದಾರೆ. ರಸ್ತೆಯಲ್ಲಿ ನಿಲ್ಲಿಸಿದಂತಹ ಕಾರುಗಳಂತೂ ಪ್ರವಾಹದ ರಭಸಕ್ಕೆ ತೇಲಿಹೋಗುತ್ತಿದ್ದರೆ, ಇತ್ತ ಹಾವು, ಮೊಸಳೆಗಳು ರಸ್ತೆಗೆ ಬಂದು ಬಿಟ್ಟಿವೆ. ಇನ್ನು ಕೆಲವರು ಪ್ರವಾಹದಲ್ಲಿ ಮನೆಗೆ ಬಂದ ಮೀನುಗಳನ್ನು ಹಿಡಿಯೋ ಕೆಲಸ ಮಾಡುತ್ತಿದ್ದಾರೆ.

https://twitter.com/seungyouncloud/status/1212566923189178368

ಬುಧವಾರ ಹೊಸ ವರ್ಷದ ಆಚರಣೆ ಸಂಭ್ರಮದಲ್ಲಿ ಇದ್ದ ಜಕಾರ್ತ ಜನರಿಗೆ ಮಳೆರಾಯ ಶಾಕ್ ಕೊಟ್ಟಿದ್ದಾನೆ. ಎಡಬಿಡದೆ ಸುರಿದ ಮಳೆಗೆ ನೆರೆ ಉಂಟಾಗಿದ್ದು, ಜಕಾರ್ತ ನಲುಗಿಹೋಗಿದೆ. ನೆರೆಯ ಹಿನ್ನೆಲೆ ಜಕಾರ್ತದ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಇತ್ತ ಸುಮಾರು 20 ಸಾವಿರ ಮಂದಿ ನೆರೆಯಿಂದ ಪರದಾಡುತ್ತಿದ್ದಾರೆ. ಎಡಬಿಡದೆ ಸುರಿದ ಮಳೆಯಿಂದ ಇಂಡೋನೇಷ್ಯಾದ ಬಹುತೇಕ ನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಜಕಾರ್ತ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ನೆರೆ ಉಂಟಾಗಿದೆ. ಅಲ್ಲದೆ ಜಕಾರ್ತ ಹೊರವಲಯದಲ್ಲಿ ಕೋಟಾ ಡಿಪೋಕ್ ನಗರದಲ್ಲಿ ಭೂಕುಸಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಹಾಹ ಪೀಡಿತ ಪ್ರದೇಶಗಳಲ್ಲಿ ಬರೋಬ್ಬರಿ 370 ಮಿ.ಮಿ ಮಳೆಯಾಗಿದ್ದು, ಇಂಡೋನೇಷ್ಯಾದಲ್ಲಿ ಏಪ್ರಿಲ್‍ವರೆಗೂ ಹೀಗೆ ಹಲವೆಡೆ ಪ್ರವಾಹ ಸಂಭವಿಸುವ ಸಾಧ್ಯತೆ ಇರುವ ಬಗ್ಗೆ ಹವಮಾನ ಇಲಾಖೆ ತಿಳಿಸಿದೆ ಎಂದು ಜಕಾರ್ತ ರಾಜ್ಯಪಾಲರು ತಿಳಿಸಿದ್ದಾರೆ.

ಈಗಾಗಲೇ ಜಕಾರ್ತದಲ್ಲಿ 8 ಮಂದಿ, ಕೋಟಾ ಡಿಪೋಕ್‍ನಲ್ಲಿ 3 ಮಂದಿ ಸೇರಿದಂತೆ ಇಂಡೋನೇಷ್ಯಾದ ಇತರೆ ನೆರೆ ಪೀಡಿತ ಪ್ರದೇಶಗಳಲ್ಲಿ ಒಟ್ಟು 16 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದಾರೆ. ಹೊಸ ವರ್ಷಾಚರಣೆಯಲ್ಲಿದ್ದ ಮಂದಿ ಮಳೆರಾಯನ ಆರ್ಭಟದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

Comments

Leave a Reply

Your email address will not be published. Required fields are marked *