ಪ್ರಯಾಣಿಕರೊಬ್ಬರ ಮೇಲೆ ಇಂಡಿಗೋ ಸಿಬ್ಬಂದಿಯಿಂದ ಹಲ್ಲೆ- ವಿಡಿಯೋ ವೈರಲ್

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಮೇಲೆ ಇಂಡಿಗೋ ಸಿಬ್ಬಂದಿ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಘಟನೆ ಅಕ್ಟೋಬರ್ 15 ರಂದು ನಡೆದಿದೆ. ರಾಜೀವ್ ಕಟಿಯಾಲ್ ಎಂಬ ಪ್ರಯಾಣಿಕರು ಚೆನ್ನೈನಿಂದ ದೆಹಲಿಗೆ ಬಂದಿದ್ದರು. ಅವರ ಮೇಲೆ ಇಂಡಿಗೋದ ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ವಿಡಿಯೋ ಸಾಮಾಜಿಕ ಜಾಣ ತಾಣದಲ್ಲಿ ವೈರಲ್ ಆಗಿತ್ತು. ನಂತರ ಎಚ್ಚೆತ್ತುಕೊಂಡ ಇಂಡಿಗೋ ಸಂಸ್ಥೆ ಹಲ್ಲೆ ಮಾಡಿದ ಪ್ರಮುಖ ಆರೋಪಿಯನ್ನು ಕೆಲಸದಿಂದ ತೆಗೆದುಹಾಕಿದ್ದು, ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಪ್ರಯಾಣಿಕರ ಬಳಿ ಕ್ಷಮೆ ಕೇಳಿದೆ.

ಘಟನೆ ಕುರಿತು ಸಮಿತಿ ರಚಿಸಿ, ವರದಿ ಆಧಾರದ ಮೇಲೆ ಪ್ರಯಾಣಿಕನ ಮೇಲೆ ಕೈ ಮಾಡಿದ್ದ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಅಷ್ಟೇ ಅಲ್ಲದೇ ಹಲ್ಲೆಗೆ ಒಳಗಾದ ರಾಜೀವ್ ಕಟಿಯಾಲ್ ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಕ್ಷಮೆ ಕೇಳಲಾಗಿದೆ ಎಂದು ಇಂಡಿಗೋ ಸಂಸ್ಥೆ ಮುಖ್ಯಸ್ಥ ಆದಿತ್ಯ ಘೋಷ್ಯ ಹೇಳಿದ್ದಾರೆ.

ಚೈನೈ ನಿಂದ ದೆಹಲಿಗೆ ಬಂದು ಇಳಿದಿದ್ದ ಕಟಿಯಾಲ್ ಹಾಗೂ ಇತರೆ ಪ್ರಯಾಣಿಕರು ಟರ್ಮಿನಲ್ ಗೆ ಹೋಗಲು ಕೋಚ್‍ಗಾಗಿ ಕಾಯುತ್ತಿದ್ದರು. ಆದ್ರೆ ಕೋಚ್ ತಡವಾಗಿ ಆಗಮಿಸಿದ್ದಕ್ಕೆ ಕಟಿಯಾಲ್ ಕೋಪಗೊಂಡು ರೇಗಾಡತೊಡಗಿದ್ದರು. ಈ ವೇಳೆ ಕಟಿಯಾಲ್ ಮತ್ತು ಇಂಡಿಗೋ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಕಟಿಯಾಲ್ ಅವರು ಕೋಚ್‍ನೊಳಗೆ ಹೋಗದಂತೆ ಸಿಬ್ಬಂದಿ ತಡೆದಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಕಟಿಯಾಲ್ ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದ್ದಾರೆ.

ನಂತರ ಜಗಳ ವಿಕೋಪಕ್ಕೆ ಹೋಗಿ ಕಟಿಯಾಲ್ ಅವರನ್ನು ಸಿಬ್ಬಂದಿ ಕೆಳಗೆ ಬೀಳಿಸಿ ಅವರ ಕತ್ತು ಹಿಡಿದಿದ್ದಾರೆ. ನಂತರ ಇತರೆ ಸಿಬ್ಬಂದಿ ಬಂದು ಜಗಳ ಬಿಡಿಸಿದ್ದಾರೆ. ಇದನ್ನು ಸ್ಥಳದಲ್ಲಿದ್ದವರೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ.

ಈ ಘಟನೆ ಕುರಿತು ನಾಗರಿಕ ವಿಮಾನಯಾನ ಸಚಿವ ಅಶೋಕ ಗಜಪತಿ ರಾಜು ಖಂಡನೆ ವ್ಯಕ್ತಪಡಿಸಿದ್ದು, ನಾಗರೀಕ ವಿಮಾನಯಾನ ನಿರ್ದೇಶನಾಲಯದಿಂದ ವರದಿ ಕೇಳಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ ನಿಯಮದಡಿಯಲ್ಲಿ ಈ ಘಟನೆಯನ್ನು ತನಿಖೆ ಮಾಡಲಾಗಿದೆ ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆದಿತ್ಯ ಅವರು ತಿಳಿಸಿದ್ದಾರೆ.


Comments

Leave a Reply

Your email address will not be published. Required fields are marked *