ಸೊಳ್ಳೆಗಳಿವೆ ಎಂದಿದ್ದಕ್ಕೆ ಬೆಂಗಳೂರಿನ ವೈದ್ಯರನ್ನು ವಿಮಾನದಿಂದ ಇಳಿಸಿದ ಇಂಡಿಗೊ ಸಿಬ್ಬಂದಿ

ಲಕ್ನೋ: ಸೊಳ್ಳೆಗಳ ಬಗ್ಗೆ ದೂರು ಹೇಳಿದ್ದಕ್ಕೆ ಬೆಂಗಳೂರು ಮೂಲದ ವೈದ್ಯರನ್ನು ವಿಮಾನದಿಂದ ಇಳಿಸಿದ್ದಾರೆ ಎನ್ನುವ ಆರೋಪ ಇಂಡಿಗೊ ಸಿಬ್ಬಂದಿಯ ಮೇಲೆ ಬಂದಿದೆ.

ಡಾ. ಸೌರಭ್ ರೈ ಸೋಮವಾರ ಬೆಳಗ್ಗೆ 6 ಘಂಟೆಗೆ ಲಕ್ನೋದಿಂದ ಬೆಂಗಳೂರಿಗೆ ಪ್ರಯಾಣಿಸುವ ವಿಮಾನವನ್ನು ಹತ್ತಿದ್ದಾರೆ. ಹತ್ತಿದ ತಕ್ಷಣವೇ ಅವರು ವಿಮಾನದಲ್ಲಿ ಸೊಳ್ಳೆ ಇದೆ ಎಂದು ಸಿಬ್ಬಂದಿ ಬಳಿ ದೂರು ಹೇಳಿದ್ದಾರೆ. ಸಿಬ್ಬಂದಿಯವರು ಇವರ ದೂರಿಗೆ ಸೂಕ್ತ ಪ್ರತಿಕ್ರಿಯೆ ನೀಡದೇ ಇದ್ದಾಗ ಕೋಪಗೊಂಡ ರೈ ಸಿಬ್ಬಂದಿ ಜೊತೆ ವಾಗ್ವಾದ ಮಾಡಲು ಆರಂಭಿಸಿದ್ದಾರೆ.

ಕೂಡಲೇ ಅವರನ್ನು ವಿಮಾನದಿಂದ ಕೆಳಗಿಳಿಸಿ ರನ್‍ವೇಯಿಂದ ಟರ್ಮಿನಲ್‍ಗೆ ನಡೆದುಕೊಂಡೇ ಬರವಂತೆ ಮಾಡಲಾಗಿದೆ ಎಂದು ವರದಿಯಾಗಿದೆ.

ವಿಮಾನದಲ್ಲಿ ತುಂಬಾ ಸೊಳ್ಳೆಗಳಿತ್ತು. ದೂರನ್ನು ಹೇಳಿದಾಗ ಸಿಬ್ಬಂದಿ ಸುಮ್ಮನೆ ಕೂರುವಂತೆ ಹೇಳಿದರು. ಸಿಬ್ಬಂದಿ ನನ್ನ ಮೇಲೆ ಕೈ ಮಾಡಿದ್ದು ಮಾತ್ರವಲ್ಲದೇ ಹೆದರಿಸಿ ವಿಮಾನದಿಂದ ಕೆಳಗೆ ಇಳಿಸಿದರು ಎಂದು ರೈ ಆರೋಪಿಸಿದ್ದಾರೆ.

ಡಾ. ಸೌರಭ್ ರೈ ವಿಮಾನದ ಸಿಬ್ಬಂದಿ ಜೊತೆ ಜೋರು ಧ್ವನಿಯಲ್ಲಿ ಮಾತನಾಡಿದರು. ಅಲ್ಲದೆ ಹೈಜಾಕ್‍ನಂತಹ ಪದಗಳನ್ನು ಬಳಸಿದರು. ಇತರೆ ಪ್ರಯಾಣಿಕರನ್ನು ಪ್ರಚೋದಿಸಲು ಪ್ರಯತ್ನಿಸಿದರು. ವಿಮಾನದ ಸುರಕ್ಷತಾ ನಿಯಮಗಳ ಪ್ರಕಾರ ಅವರನ್ನು ವಿಮಾನದಿಂದ ಹೊರಗೆ ಕಳುಹಿಸಲಾಯಿತು ಎಂದು ಇಂಡಿಗೋ ಟ್ವಿಟ್ಟರ್ ನಲ್ಲಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದೆ.

ಡಾ. ಸೌರಭ್ ರೈ ರನ್ನು ವಿಮಾನದಿಂದ ಕೆಳಗೆ ಇಳಿಸಿದ್ದರ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *